August 30, 2025
darshan_vb_89

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿ ಸುಮಾರು ಐದು ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರಿಗೆ ಕೊನೆಗೂ ಸೆರೆಮನೆ ವಾಸದಿಂದ ಮುಕ್ತಿ ಸಿಕ್ಕಿದೆ.

ಹೈಕೋರ್ಟ್ ಪೀಠ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ವೈದ್ಯಕೀಯ ಚಿಕಿತ್ಸೆಯ ಆಧಾರದಲ್ಲಿ ಹೈಕೋರ್ಟ್ ನ್ಯಾಯಾಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಣೆ ಪಡೆಯಲು ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ನೀಡುವಂತೆ ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಪೀಠದ ಮುಂದೆ ಮನವಿ ಸಲ್ಲಿಸಿದ್ದರು. ದರ್ಶನ್‌ ಜಾಮೀನು ಅರ್ಜಿಗೆ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ಆಕ್ಷೇಪ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳು ಇಂದಿಗೆ ಆದೇಶವನ್ನು ಕಾಯ್ದಿರಿಸಿದ್ದರು. ಇಂದು ಬೆಳಗ್ಗೆ ಆದೇಶ ಪ್ರಕಟಿಸಿದ ನ್ಯಾಯಮೂರ್ತಿಗಳು ದರ್ಶನ್ ಅವರಿಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದರು.

ದರ್ಶನ್ ಪರ ವಾದಿಸಿದ್ದ ಖ್ಯಾತ ವಕೀಲ ಸಿ.ವಿ ನಾಗೇಶ್, ವೈದ್ಯಕೀಯ ಚಿಕಿತ್ಸೆಯ ಆಧಾರದಲ್ಲಿ ಜಾಮೀನಿಗೆ ಮನವಿ ಮಾಡಿದ್ದರು. ಬಳ್ಳಾರಿ ಜೈಲಿನಲ್ಲಿ ದರ್ಶನ್ ಬೆನ್ನುಮೂಳೆ ನೋವಿನಿಂದ ಬಳಲುತ್ತಿದ್ದಾರೆ, ಸರಿಯಾಗಿ ರಕ್ತ ಪರಿಚಲನೆ ಆಗುತ್ತಿಲ್ಲ, ಕಾಲು ಮರಗಟ್ಟುವಿಕೆ ಆಗುತ್ತಿದೆ, ಅವರಿಗೆ ಸರಿಯಾಗಿ ನಡೆಯಲೂ ಆಗುತ್ತಿಲ್ಲ, 2022-23ರಲ್ಲೂ ದರ್ಶನ್ ಈ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಂಡಿದ್ದರು, ಇದು ಮುಂದುವರಿದರೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ, ಶಸ್ತ್ರ ಚಿಕಿತ್ಸೆ ನಡೆಸದಿದ್ದರೆ ಪ್ಯಾರಾಲಿಸಿಸ್‌ಗೆ ತುತ್ತಾಗಬಹುದು, ಹೀಗಾಗಿ ದರ್ಶನ್‌ ಅವರಿಗೆ ಸರ್ಜರಿ ಮಾಡಬೇಕಾದ ಅಗತ್ಯ ಇರುವುದರಿಂದ ಜಾಮೀನು ನೀಡಬೇಕು ಎಂದು ಹೈಕೋರ್ಟ್ ಪೀಠದ ಮುಂದೆ ಮನವಿ ಮಾಡಿದ್ದರು. ದರ್ಶನ್ ಅವರ ವೈದ್ಯಕೀಯ ವರದಿಯನ್ನು ಪೀಠಕ್ಕೆ ಸಲ್ಲಿಸಿದ್ದರು.

ದರ್ಶನ್ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಎಸ್‌ಪಿಪಿ ಪ್ರಸನ್ನ ಕುಮಾರ್, ಎಷ್ಟು ದಿನಗಳ ಕಾಲ ಚಿಕಿತ್ಸೆ ಬೇಕು ಮತ್ತು ಎಷ್ಟು ದಿನಗಳಲ್ಲಿ ಗುಣಮುಖರಾಗುತ್ತಾರೆ ಎಂಬ ಬಗ್ಗೆ ವೈದ್ಯಕೀಯ ವರದಿಯಲ್ಲಿ ಉಲ್ಲೇಖ ಇಲ್ಲ, ಶಸ್ತ್ರಚಿಕಿತ್ಸೆಯ ಅಗತ್ಯ ಇದೆಯಾ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ ಎಂದು ವಾದಿಸಿದರು. ಅಂತಿಮವಾಗಿ ಹೈಕೋರ್ಟ್ ವೈದ್ಯಕೀಯ ಚಿಕಿತ್ಸೆಯ ಆಧಾರದಲ್ಲಿ ನಟ ದರ್ಶನ್ ಅವರಿಗೆ ಜಾಮೀನು ನೀಡಿದೆ.

ಜಾಮೀನು ಪಡೆದಿರುವ ನಟ ದರ್ಶನ್ ಅವರು ಕೆಲವೇ ಗಂಟೆಗಳಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಳ್ಳಲಿದ್ದಾರೆ. ಬಳಿಕ ಬೆಂಗಳೂರಿಗೆ ತೆರಳಲಿದ್ದಾರೆ. ಆ ಬಳಿಕ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ.

ಜೂನ್ 8ರಂದು ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿಯ ಕೊಲೆ ನಡೆದಿತ್ತು, ಜೂನ್ 9ರಂದು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ರೇಣುಕಾಸ್ವಾಮಿಯ ಮೃತದೇಹ ಪತ್ತೆಯಾಗಿತ್ತು. ಜೂನ್ 10ರಂದು ನಾಲ್ವರು ಪೊಲೀಸ್ ಠಾಣೆಯಲ್ಲಿ ಶರಣಾಗಿ ನಾವೇ ಕೊಲೆ ಮಾಡಿರುವುದಾಗಿ ತಿಳಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದಾಗ ದರ್ಶನ್ ಮತ್ತು ಸಹಚರರು ಕೊಲೆ ಮಾಡಿರುವುದು ತಿಳಿದು ಬಂದಿದ್ದಾಗಿ ಪೊಲೀಸರು ತಿಳಿಸಿದ್ದರು. ಜೂನ್ 11ರಂದು ದರ್ಶನ್ ಮತ್ತು ಸಹಚರರು ಸೇರಿ ಒಟ್ಟು 17 ಜನರ ಬಂಧನವಾಗಿತ್ತು. ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಆರೋಪದಲ್ಲಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿನಲ್ಲಿ ಕೊಲೆ ನಡೆಸಿರುವುದಾಗಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಈಗಾಗಲೇ ಐವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಸದ್ಯ ದರ್ಶನ್ ಸೇರಿ ಆರು ಮಂದಿಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದು, ಉಳಿದ 11 ಮಂದಿ ಆರೋಪಿಗಳು ಜೈಲಿನಲ್ಲಿದ್ದಾರೆ.

ತಮ್ಮ ನೆಚ್ಚಿನ ನಟನಿಗೆ ಜಾಮೀನು ಸಿಕ್ಕಿದ್ದರಿಂದ ದರ್ಶನ್ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ.

About The Author

Leave a Reply