
ಸುರತ್ಕಲ್: ಧಾರ್ಮಿಕ ಮುಖಂಡ ಮಮ್ತಾಜ್ ಅಲಿ ಅವರ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸರಿಯಾದ ತನಿಖೆ ಮಾಡಿ ಕೃತ್ಯ ಎಸಗಿದವರಿಗೆ ಸೂಕ್ತ ಕಠಿಣ ಶಿಕ್ಷೆ ನೀಡುವ ಮುಖಾಂತರ ಅವರ ಸಾವಿಗೆ ನ್ಯಾಯ ಒದಗಿಸಬೇಕೆಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಾಪುರ ಅವರು ಆಗ್ರಹಿಸಿದ್ದಾರೆ.



ಕೃಷ್ಣಾಪುರ 7ನೇ ಬ್ಲಾಕ್ ನ ಕೇಂದ್ರ ಜುಮಾ ಮಸೀದಿಗೆ ಆಗಮಿಸಿ ಮಮ್ತಾಜ್ ಅಲಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ದುವಾ ನೆರವೇರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಇಂತಹಾ ಕೃತ್ಯ ಎಸಗುವ ಇತರರಿಗೆ ಸಂದೇಶ ನೀಡಬೇಕೆಂದು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಾದ ಪರಮೇಶ್ವರ್ ಅವರಲ್ಲಿ ಮಾತನಾಡುತ್ತೇನೆ ಎಂದರು. ಮಮ್ತಾಜ್ ಅಲಿ ಅವರು ನನ್ನ ಆತ್ಮೀಯರಾದ್ದವರು. ಕರ್ನಾಟಕಕ್ಕೆ ಬಂದಾಗ ನನ್ನ ಜೊತೆಯಾಗಿ ಇದ್ದು ಎಲ್ಲಾ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಕೈ ಜೋಡಿಸುತ್ತಿದ್ದರು. ಎಲ್ಲಾ ಧಾರ್ಮಿಕ ಸಮ್ಮೆಳನಗಳಲ್ಲಿಯೂ ಭಾಗವಹಿಸಿ ಯಶಸ್ಸಿಗೆ ಸಹಕರಿಸುತ್ತಿದ್ದರು. ಮೃದು ಸ್ವಭಾವ ಹಾಗೂ ಜನರ ನಡುವೆ ಸದಾ ಇದ್ದು ಕೆಲಸ ಮಾಡುವ ಅವರನ್ನು ಕಳೆದುಕೊಂಡಿರುವುದು ಅಪಾರ ದುಃಖ ತಂದಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಈ ಸಂದರ್ಭ ಅತಾವುಲ್ಲಾ ತಂಙಳ್, ಕೃಷ್ಣಾಪುರ ಖಾಝಿ ಇ.ಕೆ. ಇಬ್ರಾಹಿಂ ಮುಸ್ಲಿಯಾರ್, ಮಿಸ್ಬಾಹ್ ನಾಲೆಜ್ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ, ಕೃಷ್ಣಾಪು ಜುಮಾ ಮಸೀದಿಯ ಖತೀಬ್ ಫಾರೂಕ್ ಸಖಾಫಿ, ಮಾಜಿ ಶಾಸಕ ಹಾಗೂ ಮಮ್ತಾಝ್ ಅಲಿ ಅವರ ಹಿರಿಯ ಸಹೋದರ ಮೊಯ್ದೀನ್ ಬಾವಾ, ಮತ್ತೋರ್ವ ಸಹೋದರ ಹೈದರ್ ಅಲಿ, ಬಿ.ಎ. ನಝೀರ್, ಹಕೀಂ ಫಾಲ್ಕಾನ್ ಮತ್ತಿತರರು ಉಪಸ್ಥಿತರಿದ್ದರು.