November 9, 2025
gas

ಉಳ್ಳಾಲ: ಮನೆಯೊಳಗಡೆ ಭಾರೀ ಸ್ಫೋಟವುಂಟಾಗಿ ತಾಯಿ ಹಾಗೂ ಮೂವರು ಹೆಣ್ಮಕ್ಕಳು ಗಂಭೀರ ಸುಟ್ಟ ಗಾಯಗಳಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಅಡುಗೆ ಗ್ಯಾಸ್ ಸಿಲಿಂಡರ್ ಸ್ಫೋಟಿಸಿ  ಘಟನೆ ಸಂಭವಿಸಿದೆ ಎನ್ನಲಾಗಿದೆ.

ಶನಿವಾರ ಮಧ್ಯರಾತ್ರಿ ನಾಟೆಕಲ್ ಮಂಜನಾಡಿ ಎಂಬಲ್ಲಿ ಘಟನೆ ಸಂಭವಿಸಿದೆ. ಮಂಜನಾಡಿಯ ಖಂಡಿಕ ನಿವಾಸಿ ವಿದೇಶದಲ್ಲಿರುವ ಮುತ್ತಲಿಬ್ ಎಂಬವರ ಮನೆಯಲ್ಲಿ ಸ್ಫೋಟ ನಡೆದಿದೆ. ಮುತ್ತಲಿಬ್ ಪತ್ನಿ ಖುಬ್ರಾ ಮತ್ತು ಮೂವರು ಮಕ್ಕಳಾದ ಮೆಅದಿಯಾ, ಮಝಿಯಾ, ಮಾಯಿದಾ ಅವರು ಒಂದೇ ಕೊಠಡಿಯಲ್ಲಿ ಮಲಗಿದ್ದರು. ಮಧ್ಯರಾತ್ರಿ ವೇಳೆ ಮನೆಯೊಳಗಡೆ ಭಾರೀ ಸ್ಫೋಟದ ಸದ್ದು ಕೇಳಿಸಿದೆ. ಸ್ಫೋಟದ ತೀವ್ರತೆಗೆ ತಾರಸಿ ಮನೆಯ ಮೇಲ್ಭಾಗದ ಸಿಮೆಂಟ್ ಶೀಟ್ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದೆ. ತಾಯಿ ,ಮಕ್ಕಳು ಮಲಗಿದ್ದ ಕೊಠಡಿ, ಮಂಚ, ಕಿಟಕಿ ಸಂಪೂರ್ಣ ಛಿಧ್ರಗೊಂಡು ಸುಟ್ಟು ಕರಕಲಾಗಿದೆ.

ಈ ಸಂದರ್ಭ ತಾಯಿ ಜೊತೆ ಮಲಗಿದ್ದ ಹಿರಿ ಮಗಳು ಬಾಗಿಲು ತೆರೆದಿದ್ದಾಳೆ. ತಕ್ಷಣ ನೆರವಿಗೆ ಧಾವಿಸಿದ ಸ್ಥಳೀಯರು ಬೆಂಕಿ ನಂದಿಸಿ, ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಹಾಗೂ ಮೂವರು ಮಕ್ಕಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಮನೆಯೊಳಗಿದ್ದ ಗ್ಯಾಸ್ ತುಂಬಿದ್ದ ಸಿಲಿಂಡರ್ ಸ್ಫೋಟಿಸಿ ಘಟನೆ ನಡೆದಿದೆ ಎನ್ನಲಾಗಿದೆ. ಸಿಲಿಂಡರ್ ಮನೆಯೊಳಗಿಂದ ಹೊರಗಡೆಗೆ ಎಸೆಯಲ್ಪಟ್ಟಿದೆ.

ಘಟನಾ ಸ್ಥಳಕ್ಕೆ ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About The Author

Leave a Reply