November 8, 2025
WhatsApp Image 2024-11-25 at 9.37.28 AM

ಉಳ್ಳಾಲ: ಉಳ್ಳಾಲ ಪೊಲೀಸ್‌ ಠಾಣೆಯೊಳಗಡೆ ಬಜರಂಗದಳದ ಸಂಯೋಜಕ ಅರ್ಜುನ್‌ ಮಾಡೂರು ಅವರಿಗೆ ಹಲ್ಲೆಗೈದಿದ್ದ ಆರೋಪಿ, ಕೇರಳದ ಹೊಸಂಗಡಿ ಕಡಂಬಾರು ನಿವಾಸಿ ಮಹಮ್ಮದ್‌ ಆಸಿಫ್‌ ಜಾಮೀನು ಪಡೆದು ಜೈಲಿನಿಂದ ಹೊರ ಬರುತ್ತಿದ್ದಾಗ ತಂಡವೊಂದು ತಲವಾರು ದಾಳಿಗೆ ಯತ್ನಿಸಿದ್ದ ಘಟನೆಗೆ ಸಂಬಂಧಿಸಿ ಘಟನೆಗೆ ಕಾರಣಕರ್ತನಾಗಿದ್ದ ಹಿಂದೂ ಮುಖಂಡ ಅರ್ಜುನ್‌ ಮಾಡೂರ ಅವರನ್ನು ಉಳ್ಳಾಲ ಪೊಲೀಸರು  ಬಂಧಿಸಿದ್ದಾರೆ. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ತೊಕ್ಕೊಟ್ಟಿನ ಮೇಲ್ಸೇತುವೆಯಲ್ಲಿ ಸಂಭವಿಸಿದ್ದ ಕಾರುಗಳ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ  ನಡೆದ ಹೊಡೆದಾಟ ಉಳ್ಳಾಲ ಪೊಲೀಸ್‌ ಠಾಣೆಯ ಮೆಟ್ಟಿಲೇರಿತ್ತು. ಈ ಸಂದರ್ಭ ಸ್ನೇಹಿತನ ಸಹಾಯಕ್ಕಾಗಿ ಠಾಣೆಗೆ ಆಗಮಿಸಿದ್ದ ಅರ್ಜುನ್‌ಗೆ ಇನ್ನೊಂದು ತಂಡದ  ಮಹಮ್ನದ್‌ ಆಸೀಫ್‌ ಎಂಬಾತನು ಇನ್‌ಸ್ಪೆಕ್ಟರ್‌ ಕೊಠಡಿಯಲ್ಲೇ ಹಲ್ಲೆ ನಡೆಸಿದ್ದ ಆರೋಪ ಕೇಳಿಬಂದಿತ್ತು.

ಅರ್ಜುನ್‌ ಮೇಲಿನ ಹಲ್ಲೆ ಖಂಡಿಸಿ ಮಧ್ಯರಾತ್ರಿಯೇ ಹಿಂದೂ ಸಂಘಟನೆ ಕಾರ್ಯಕರ್ತರು ಉಳ್ಳಾಲ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಬಳಿಕ ಪೊಲೀಸರು  ಆಸಿಫ್‌ನನ್ನು ಬಂಧಿಸಿದ್ದರು.  ನ.8 ರಂದು ಆಸಿಫ್ ಜಾಮೀನಿನಲ್ಲಿ ಬಿಡುಗಡೆಯಾಗಿ  ಹೊಸಂಗಡಿಗೆ ತೆರಳುತ್ತಿದ್ದಾಗ ತಲಪಾಡಿ ಬಳಿಯ ಕೆ.ಸಿ. ರೋಡ್‌ನಿಂದ ಮಾರಕಾಯುಧ ಹೊಂದಿದ್ದ ಆಗಂತುಕರು  ಬೆನ್ನಟ್ಟಿದ್ದರೆಂದು ಆರೋಪಿಸಿ ಆಸಿಫ್‌ ಉಳ್ಳಾಲ ಠಾಣೆಗೆ ದೂರು ನೀಡಿದ್ದ.

ತನಿಖೆ ನಡೆಸಿದ್ದ  ಪೊಲೀಸರು ಇಡ್ಯ ಈಶ್ವರ ನಗರದ ಅಣ್ಣಪ್ಪ ಸ್ವಾಮಿ ಯಾನೆ ಮನು (24), ಪಡೀಲ್‌ ನಾರ್ಲದ ಸಚಿನ್‌ (24), ಪಜೀರು ಪಾದಲ್‌ ಕೋಡಿಯ ಕುಶಿತ್‌ (18) ಮತ್ತು ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ವಯಸ್ಕನನ್ನು ಬಂಧಿಸಿದ್ದರು. ಈಗ  ಅರ್ಜುನ್‌ನನ್ನು  ಬಂಧಿಸಲಾಗಿದೆ. ಆರೋಪಿಗಳಲ್ಲಿ ಕುಶಿತ್‌ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾನೆ.

About The Author

Leave a Reply