ಬಂಟ್ವಾಳ: ಶಂಭೂರಿನಿಂದ ಜೋಗ್ ಫಾಲ್ಸ್ ಗೆ ಪ್ರವಾಸಕ್ಕೆಂದು ತೆರಳಿದ್ದ ಖಾಸಗಿ ಬಸ್ ಪಲ್ಟಿ- 20ಕ್ಕೂ ಅಧಿಕ ಮಂದಿಗೆ ಗಾಯ

ಬಂಟ್ವಾಳ: ಶಂಭೂರಿನಿಂದ ಜೋಗ್ ಫಾಲ್ಸ್ ಗೆ ಪ್ರವಾಸಕ್ಕೆಂದು ತೆರಳಿದ್ದ ಖಾಸಗಿ ಬಸ್ ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರ್ಗಲ್ ಎಂಬಲ್ಲಿ ರಸ್ತೆಯಲ್ಲಿ ಪಲ್ಟಿಯಾಗಿದೆ, ಘಟನೆಯಲ್ಲಿ ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದು, ಉಳಿದಂತೆ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರಿಗೂ ಗಾಯಗಳಾಗಿದ್ದು ಸಮೀಪವಿರುವ ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಂಭೂರುವಿನಲ್ಲಿರುವ ಶ್ರೀಸಾಯಿ ಮಂದಿರದಿಂದ ಜೋಗ್ ಫಾಲ್ಸ್ ಗೆ ಪ್ರವಾಸ ಹೋಗಿದ್ದ ಖಾಸಗಿ ಬಸ್ ಜೋಗ್ ಫಾಲ್ಸ್ ಗೆ ಇನ್ನೇನು ತಲುಪಲು ಕೆಲವೇ ಕಿಮೀ ದೂರದ ಕಾರ್ಗಲ್ ಎಂಬಲ್ಲಿ ಹೋಗುತ್ತಿದ್ದಂತೆ ರಸ್ತೆಯಿಂದ ಹಳ್ಳಕ್ಕೆ ಉರುಳಿ ಬಿದ್ದಿದೆ.
ಶಂಭೂರು ನಿವಾಸಿಗಳಾದ ಯಶೋಧ ಹಾಗೂ ದೀಕ್ಷಿತಾ ಅವರಿಗೆ ಗಂಭೀರವಾಗಿ ಗಾಯವಾಗಿದ್ದು, ಇವರ ಜೊತೆ ಬಸ್ ನಲ್ಲಿದ್ದ ಇಬ್ಬರು ಪುಟಾಣಿ ಮಕ್ಕಳಿಗೆ ತಲೆ ಹಾಗು ಕಣ್ಣಿಗೆ ಗಾಯವಾಗಿದೆ ಎಂಬುದನ್ನು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಹಿಂಬದಿಯಲ್ಲಿ ಕಾರಿನಿಂದ ತೆರಳುತ್ತಿದ್ದ ಬಂಟ್ವಾಳ ಮೂಲದ ಇಂಜಿನಿಯರ್ ಆಗಿರುವ ಚೈತ್ರೇಶ್ ಅವರು ಬಂಟ್ವಾಳ ‌ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ರೋಗಿಗಳನ್ನು ಆಸ್ಪತ್ರೆಗೆ ಕೊಂಡುಹೋಗುವಲ್ಲಿ ಇವರು ಪ್ರಯತ್ನ ಗಮನ ಸೆಳೆದಿದೆ.
ಶಾಸಕರು ಕೂಡಲೇ ಸ್ಪಂದಿಸಿದ್ದಲ್ಲದೆ ಗಾಯಳುಗಳನ್ನು ಅಲ್ಲಿನ ಸಾಗರ ಆಸ್ಪತ್ರೆಗೆ ದಾಖಲಿಸಲು ಬೇಕಾಗುವ ವ್ಯವಸ್ಥೆ ಕಲ್ಪಿಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಇಬ್ಬರು ಗಾಯಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನು ಶಾಸಕರು ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಸಂಪರ್ಕ ಮಾಡಿದ್ದಾರೆ, ಜೊತೆಗೆ ಅಲ್ಲಿನ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ವಿಧಾನಪರಿಷತ್ ಸದಸ್ಯ ಡಾ| ಧನಂಜಯ ಸರ್ಜಿ ಅವರಿಗೆ ಘಟನೆಯ ಕುರಿತು ಮಾಹಿತಿ‌ನೀಡಿ ಗಾಯಗಳುಗಳನ್ನು ಆಸ್ಪತ್ರೆಗೆ ಸಾಗಿಸುವ ದೃಷ್ಟಿಯಿಂದ ಬೇಕಾಗುವ ಅಂಬ್ಯುಲೆನ್ಸ್ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ಶಾಸಕರ ಮನವಿ ಮೇರೆಗೆ ಬಂಟ್ವಾಳದ ಉದ್ಯಮಿ ಉದಯಕುಮಾರ್ ಅವರ ಸೋಧರ ಸಂಬಂಧಿಯಾಗಿರು ಜೋಗ ಕಾರ್ಗಲ್ ಪಟ್ಟಣ ಪಂಚಾಯತ್ ಸದಸ್ಯ ಹರೀಶ್ ಗೌಡ ಹಾಗೂ ಪಟ್ಟಣ ಪಂಚಾಯತ್ ಸದಸ್ಯರು ಗಳಾದ ಬಾಲಸುಬ್ರಹ್ಮಣ್ಯ ಮತ್ತು ಗುರುಸಿದ್ದಪ್ಪ ಅವರು ಸ್ಥಳಕ್ಕೆ ಧಾವಿಸಿ ಸುಮಾರು 10 ಅಂಬ್ಯುಲೆನ್ಸ್ ಮೂಲಕ ಗಾಯಗಳು ಗಳನ್ನು ಸಾಗರ ಆಸ್ಪತ್ರೆಗೆ ದಾಖಲಿಸುವ ಕಾರ್ಯ ಮಾಡಿದ್ದಾರೆ.
ಶಂಭೂರಿನ ಶ್ರೀ ಸಾಯಿ ಮಂದಿರ ದಿಂದ ಇಂದು ಬೆಳಿಗ್ಗೆ 5 ಗಂಟೆಗೆ ಖಾಸಗಿ ಬಸ್ ಮೂಲಕ ಪ್ರಯಾಣ ಕೈಗೊಂಡ ಪ್ರವಾಸಿಗರು, ಶಂಭೂರು, ಪಾಣೆಮಂಗಳೂರು, ಬಿಸಿರೋಡು ಹಾಗೂ ಮಂಗಳೂರು ಕಡೆಯಿಂದ ಸುಮಾರು 45 ಜನರನ್ನು ಹತ್ತಿಸಿಕೊಂಡು ಜೋಗ್ ಫಾಲ್ಸ್ ಗೆ ತೆರಳಿದ್ದರು.
ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾದ ಕೂಡಲೇ ವಾಹಿನಿ‌ಮೂಲಕ ತಿಳಿಸಲಾಗುತ್ತದೆ.

Leave a Reply