ಮಂಗಳೂರು:ಶಾಸಕ ಹರೀಶ್ ಪೂಂಜಾರಂತಹ ಅತೀ ಬುದ್ಧಿವಂತರಿಗೆ ಗೋವುಗಳಿಗೂ ಬದುಕುವ ಹಕ್ಕಿದೆ ಎಂದು ಗೊತ್ತಿಲ್ವೇ? ಸ್ಪೀಕರ್ ಯು.ಟಿ.ಖಾದರ್ ಲೇವಡಿ

ಮಂಗಳೂರು: ಶಾಸಕ ಹರೀಶ್ ಪೂಂಜಾರಂತಹ ಅತೀ ಬುದ್ಧಿವಂತರಿಗೆ ಗೋವುಗಳಿಗೂ ಬದುಕುವ ಹಕ್ಕಿದೆ ಎಂದು ಗೊತ್ತಿಲ್ವೇ? ದೇಶದ ಅತೀ ಸಣ್ಣ ಮಕ್ಕಳಿಗೂ ಗೊತ್ತಿರುವ ವಿಚಾರ ಅವರಿಗೆ ಗೊತ್ತಿಲ್ಲದಿರುವುದು ಅತ್ಯಂತ ಖೇದಕರ. ಯಾರಿಗೆಲ್ಲಾ ಬದುಕುವ ಹಕ್ಕಿದೆ ಎಂದು ಬರವಣಿಗೆಯಲ್ಲಿ ಬರೆದು ಕಳುಹಿಸುತ್ತೇವೆ ಎಂದು ಸ್ಪೀಕರ್ ಯು.ಟಿ.ಖಾದರ್ ಲೇವಡಿ ಮಾಡಿದರು.

ಮನುಷ್ಯರಿಗೆ ಮಾತ್ರವಲ್ಲ ಆನೆಗಳಿಗೂ ಬದುಕುವ ಹಕ್ಕಿದೆ ಎಂಬ ಸ್ಪೀಕರ್ ಮಾತಿಗೆ ಶಾಸಕ ಹರೀಶ್ ಪೂಂಜಾ ಪ್ರತಿಕ್ರಿಯಿಸಿ, ಹಾಗಾದರೆ ಗೋವುಗಳಿಗೂ ಬದುಕುವ ಹಕ್ಕಿದೆ ಎಂದು ಗೋಹತ್ಯಾ ನಿಷೇಧ ಕಾನೂನು ಹಿಂಪಡೆಯುವಿರಾ ಎಂದು ಟಾಂಗ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್ ಅವರು, ಗೋಹತ್ಯಾ ನಿಷೇಧ ಕಾನೂನನ್ನು ದೇಶದಲ್ಲಿ ಜಾರಿಗೊಳಿಸಿದವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು. ಅವರು ಬೇರೆಬೇರೆ ರಾಜ್ಯಕ್ಕೊಂದು ಕಾನೂನು ಜಾರಿಗೊಳಿಸಿಲ್ಲ.

ದೇಶದಲ್ಲಿಯೇ ಇದು ಜಾರಿಯಾಗಿದೆ ಎಂದರು. ಆದರೆ ರಾಜ್ಯದಲ್ಲಿ ಆ ಕಾನೂನು ಹಿಂಪಡೆದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಾದರ್, ನಾನು ರಾಜಕೀಯ ಮಾತನಾಡಲು ಹೋಗುವುದಿಲ್ಲ. ಬಿಜೆಪಿ ಸರಕಾರ ಇರುವಾಗ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಯಾದಾಗ ಈ ಕಾನೂನು ಅನುಷ್ಠಾನವಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿ. ಈ ಬಗ್ಗೆ ಉತ್ತರಿಸಲಿ ಎಂದು ಖಾದರ್ ವ್ಯಂಗ್ಯವಾಡಿದರು‌.

ಸಾರಿಗೆ ಬಸ್ ದರ ಹೆಚ್ಚಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಕ್ತಿ ಯೋಜನೆಯಲ್ಲಿ ಉಚಿತ ಎಂದಿದ್ದರೂ ಸರಕಾರ ಹಣ ಕೊಡುತ್ತದೆ. ಕಷ್ಟದಲ್ಲಿರುವ ಮಹಿಳೆಯರಿಗೆ ಸಂಚಾರ ನಡೆಸಲು ಬಸ್ ಫ್ರೀ ಮಾಡಿದೆಯೇ ಹೊರತು‌, ಫ್ರೀ ಅಂಥ ಯಾವುದೂ ಇಲ್ಲ. 15% ಟಿಕೆಟ್ ದರ ಹೆಚ್ಚಳ ಮಾಡಿರುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ‌ ಎಂದು ಖಾದರ್ ಹೇಳಿದರು.

Leave a Reply