ಮಂಜೇಶ್ವರಂ : ಕೇಂದ್ರ ಹಾಗೂ ರಾಜ್ಯದ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಕೋಡಿಸುವದಾಗಿ ಜನರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ ಆರೋಪದಲ್ಲಿ ಇದೀಗ ಜೈಲಿನಲ್ಲಿರುವ ಡಿವೈಎಫ್‌ಐನ ಮಾಜಿ ಮಹಿಳಾ ನಾಯಕಿ ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಕೇಂದ್ರೀಯ ವಿದ್ಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ಯುವತಿಯಿಂದ 13.80 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ಮಂಜೇಶ್ವರಂ ಪೊಲೀಸರು ಇತ್ತೀಚಿನ ಪ್ರಕರಣ ದಾಖಲಿಸಿದ್ದಾರೆ.
ಕಾಸರಗೋಡು ಕೇಂದ್ರೀಯ ವಿದ್ಯಾಲಯದಲ್ಲಿ ಸೀನಿಯರ್ ಕ್ಲರ್ಕ್ ಕೆಲಸ ಕೊಡಿಸುವುದಾಗಿ ಬಾಯಾರಿನ ಮಹಿಳೆಯಿಂದ 13,80,000 ರೂ.ಗಳನ್ನು ಸುಲಿಗೆ ಮಾಡಿರುವ ಪ್ರಕರಣ ಇದಾಗಿದೆ.
ಇದರೊಂದಿಗೆ ಸಚಿತಾ ರೈ ಮೇಲೆ ಇರುವ ಪ್ರಕರಣಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಸಚಿತಾ ರೈ ಕೇಂದ್ರ ರಾಜ್ಯ ಸರ್ಕಾರಿ ಸಂಸ್ಥೆಗಳಾದ ಸಿಪಿಸಿಆರ್ ಐ, ಕೇಂದ್ರೀಯ ವಿದ್ಯಾಲಯ, ಎಸ್ ಬಿಐ, ಕರ್ನಾಟಕ ಅಬಕಾರಿ ಇತ್ಯಾದಿ ಸಂಸ್ಥೆಗಳಲ್ಲಿ ಕೆಲಸ ಕೊಡಿಸುವುದಾಗಿ ಹಲವು ಯುವತಿಯರು ಹಾಗೂ ಅವರ ಪೋಷಕರನ್ನು ಸುಲಿಗೆ ಮಾಡಿದ್ದಾರೆ ಎಂಬುದು ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣ.
ಸಚಿತಾ ರೈ ಪುತ್ತಿಗೆ ಬಾಡೂರಿನ ಅನುದಾನಿತ ಶಾಲೆಯ ಶಿಕ್ಷಕಿ. ಹಾಗೂ ಡಿವೈಎಫ್ಐ ಸಂಘಟನೆಯಲ್ಲಿ ಸಕ್ರಿಯವಾಗಿದ್ದರು.