
ಮಲ್ಪೆ: ಗೆಳೆಯರೊಂದಿಗೆ ಮೈಸೂರಿನಿಂದ ಮಲ್ಪೆಗೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿಯೋರ್ವರು ಹೋಮ್ ಸ್ಟೇಯಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.



ಮೃತ ವ್ಯಕ್ತಿಯನ್ನು ಅನಿಲ್ ಕುಮಾರ್ (52) ಎಂದು ಗುರುತಿಸಲಾಗಿದೆ. ತನ್ನ ಗೆಳೆಯರಾದ ಉಮೇಶ, ಮನೋಜ್ ಅಗರವಾಲ್, ಶಿವಕುಮಾರ್ ಕೆ.ಜೆ., ಗಂಗಾಧರ್ ಆರ್ ಮತ್ತು ವೆಕಟೇಶ್ ಅವರೊಂದಿಗೆ ಪ್ರವಾಸಕ್ಕೆಂದು ತೆರಳಿದ್ದ ಅನಿಲ್ ಕುಮಾರ್ ಮಲ್ಪೆಯ ಹೋಮ್ ಸ್ಟೇಯಲ್ಲಿ ರೂಮ್ ಮಾಡಿಕೊಂಡಿದ್ದರು. ಹೊಟ್ಟೆ ಉಬ್ಬರಿಸಿರುವುದಾಗಿ ಹೇಳಿ ಮಾತ್ರಯೊಂದನ್ನು ಸೇವಿಸಿದ ಅನಿಲ್ ಕುಮಾರ್, ಬಳಿಕ ಉಡುಪಿಗೆ ಹೋಗಿ ದೇವರ ದರ್ಶನ ಮಾಡಿಕೊಂಡು ವಾಪಸ್ ಹೋಮ್ ಸ್ಟೇಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಗೆಳೆಯರೊಂದಿಗೆ ಮಾತನಾಡುತ್ತಿದ್ದ ಅನಿಲ್ ಕುಮಾರ್ ಹಠಾತ್ ಕುಸಿದು ಬಿದ್ದಿದ್ದಾರೆ. ಈ ಸಂದರ್ಭ ಅವರ ತಲೆಯ ಹಿಂಭಾಗಕ್ಕೆ ಗಾಯವಾಗಿ ರಕ್ತ ಸುರಿದಿದೆ. ತಕ್ಷಣ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅದಾಗಲೇ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.