Champions Trophy 2025: ಭಾರತ-ಆಸ್ಟ್ರೇಲಿಯಾ ಮೊದಲ ಸೆಮಿಫೈನಲ್ ಹಣಾಹಣಿ

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿ ಅಂತಿಮ ಘಟದತ್ತ ಸಾಗುತ್ತಿದೆ. ಗ್ರೂಪ್ ಹಂತದ ಎಲ್ಲಾ ಪಂದ್ಯಗಳು ಮುಕ್ತಾಯವಾಗಿದ್ದು, ಇಂದು ಮೊದಲ ಸೆಮಿ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಕಾದಾಡಲಿದೆ. ದುಬೈನ ಅಂತರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಫೈನಲ್ ಪ್ರವೇಶಕ್ಕಾಗಿ  ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಕಣಕ್ಕೆ ಇಳಿಯುತ್ತಿವೆ.
ಭಾರತದ ಅಜೇಯ ಓಟ
ಭಾರತ ಈ ಕೂಟದ ಅಜೇಯ ತಂಡ. ಮೊದಲು ಬಾಂಗ್ಲಾದೇಶ, ಬಳಿಕ ಆತಿಥೇಯ ಪಾಕಿಸ್ಥಾನ, ನ್ಯೂಜಿಲ್ಯಾಂಡನ್ನು ಅಧಿಕಾರಯುತವಾಗಿ ಮಣಿಸಿ “ಎ’ ವಿಭಾಗದ * ಅಗ್ರಸ್ಥಾನ ಸಂಪಾದಿಸಿದ್ದು ಟೀಮ್ ಇಂಡಿಯಾದ ಪ್ರಭುತ್ವಕ್ಕೆ ಸಾಕ್ಷಿ. ಇನ್ನೊಂದೆಡೆ ಆಸ್ಟ್ರೇಲಿಯ ಕೂಡ ಸೋಲು ಕಾಣದ ತಂಡ, ಆದರೆ 3 ಲೀಗ್ ಪಂದ್ಯಗಳಲ್ಲಿ 2 ಪಂದ್ಯ ಮಳೆಯಿಂದ ರದ್ದಾದುದರಿಂದ ಆಸೀಸ್ ಪಡೆಯ ಪರಿಪೂರ್ಣ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ಲಭಿಸಿಲ್ಲ. ಸೆಮಿಫೈನಲ್‌ನಲ್ಲಿ ಸ್ಮಿತ್ ಪಡೆಗೆ ಇದು ಹಿನ್ನಡೆಯಾಗಿ ಪರಿಣಮಿಸಬಹುದು.
ಪಂದ್ಯಕ್ಕೆ ಮಳೆ ಅಡ್ಡಿ
ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ತೀರ ಕಡಿಮೆ. ಆದರೆ ಮಂಗಳವಾರ ಶೇ. 10ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಗಂಟೆಗೆ 27 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದ್ದು ಹವಾಮಾನದಲ್ಲಿ ತೇವಾಂಶವು ಶೇಕಡಾ 34ರವರೆಗೆ ಇರುತ್ತದೆ ಎಂದು ಹೇಳಿದ್ದಾರೆ.

ಮತ್ತೆ ಸ್ಪಿನ್ನರ್‌ಗಳ ದಾಳಿಯ ನೀರಿಕ್ಷೆ?
ಭಾನುವಾರ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಭಾರತದ ಸ್ಪಿನ್ ದಾಳಿಗೆ ನೆಲಕಚ್ಚಿತ್ತು. ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಕೈಚಳಕಕ್ಕೆ ಕಿವೀಸ್ ಸುಸ್ತು ಹೊಡೆದಿತ್ತು. ಇನ್ನು ಕುಲದೀಪ್ ಯಾದವ್, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ ಹಾಗೂ ಚಕ್ರವರ್ತಿ ಸ್ಪೀನ್ ಮೋಡಿಗೆ  39 ಓವರ್‌ನಲ್ಲಿ ಬರೊಬ್ಬರಿ 128 ಡಾಟ್ ಬಾಲ್‌ಗಳಾಗಿದ್ದವು. ಆದರೆ ಆಸ್ಟ್ರೇಲಿಯಾ ಬಳಿ ಇರುವುದು ಒಬ್ಬರೇ ಸ್ಪೆಷಲಿಷ್ಟ್ ಸ್ಪಿನ್ನರ್, ಅದು ಆ್ಯಡಂ ಝಂಪ. ಉಳಿದಂತೆ ಮ್ಯಾಕ್ಸ್‌ವೆಲ್ ಮತ್ತು ಹೆಡ್ ಸ್ಪಿನ್ ದಾಳಿಯನ್ನು ಹಂಚಿಕೊಳ್ಳಬೇಕಿದೆ.
ಕೆ.ಎಲ್‌ ರಾಹುಲ್‌ಗೆ ಬಿಗ್‌ ಶಾಕ್
ಕನ್ನಡಿಗ ಕೆ.ಎಲ್​​ ರಾಹುಲ್​​ ಮೇಲೆ ಭರವಸೆ ಇಟ್ಟು ಬಿಸಿಸಿಐ ಸೆಲೆಕ್ಷನ್​ ಕಮಿಟಿ ಆಯ್ಕೆ ಮಾಡಿದೆ. ಹಾಗೆಯೇ ಮೂರು ಪಂದ್ಯಗಳಲ್ಲೂ ರಾಹುಲ್​ ಅವರನ್ನೇ ಕಣಕ್ಕಿಳಿಸಿದೆ.
ಕೆ.ಎಲ್‌ ರಾಹುಲ್ ಜೊತೆಗೆ 2ನೇ ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದ ರಿಷಭ್ ಪಂತ್ ಬೆಂಚ್ ಕಾಯಬೇಕಾಗಿತ್ತು. ಈ ನಡುವೆ ಪಂತ್‌ಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಮುಂದಿನ ಪಂದ್ಯದಲ್ಲಿ ಇವರಿಗೆ ಚಾನ್ಸ್ ಸಿಗೋದು ಪಕ್ಕಾ ಆಗಿದೆ.
ಭಾರತ-ಬಾಂಗ್ಲಾದೇಶ ಮೊದಲ ಪಂದ್ಯದಲ್ಲಿ ವಿಕೆಟ್​ ಕೀಪಿಂಗ್​ನಲ್ಲಿ ಸ್ಥಿರ ಪ್ರದರ್ಶನ ನೀಡಿ ಕೆ.ಎಲ್​​ ರಾಹುಲ್​​​ ಬೆಸ್ಟ್​​ ಫೀಲ್ಡಿಂಗ್​ ಅವಾರ್ಡ್​ಗೆ ಭಾಜನರಾದ್ರು. ಇದಾದ ಬಳಿಕ ನಡೆದ 2​ ಪಂದ್ಯಗಳಲ್ಲೂ ಕನ್ನಡಿಗ ಕೆ.ಎಲ್​ ರಾಹುಲ್​​​ ತಮ್ಮ ಫಾರ್ಮ್​​​ ಕಾಯ್ದುಕೊಳ್ಳುವಲ್ಲಿ ಎಡವಿದರು. ವಿಕೆಟ್​ ಕೀಪಿಂಗ್​​ ಮತ್ತು ಬ್ಯಾಟಿಂಗ್​​ನಲ್ಲಿ ವೈಫಲ್ಯ ಅನುಭವಿಸಿದ್ರು ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾಗಿ ರಾಹುಲ್​​ಗೆ ಕೊಕ್​​ ನೀಡಿ ಪಂತ್​ಗೆ ಅವಕಾಶ ನೀಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.

Leave a Reply