August 30, 2025
WhatsApp Image 2025-04-05 at 5.32.30 PM

ಮಂಗಳೂರು: ಮಂಗಳೂರಿನ ಜೈಲಿನಲ್ಲಿ ಮೊಬೈಲ್ ಜಾಮರ್ ಆಳವಡಿಸಿದ ಕಾರಣ ಸುತ್ತಮುತ್ತಲಿನ ಪರಿಸರದಲ್ಲಿ ಉಂಟಾಗಿರುವ ಸಮಸ್ಯೆ ವಿರೋಧಿಸಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಜೈಲಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಜೈಲಿನಲ್ಲಿ ಮೊಬೈಲ್ ಜಾಮರ್ ಹಾಕಿದ ಪರಿಣಾಮ ಪರಿಸರದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಉಂಟಾಗಿದೆ. ಈ ಹಿನ್ನಲೆ ಬಿಜೆಪಿ ಇಂದು ಜೈಲಿನ ಎದುರು ಪ್ರತಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಜೈಲಿನಲ್ಲಿ ಏಕಾಏಕಿ 5ಜಿ ಜಾಮರ್ ಅಳವಡಿಸಿದ್ದರಿಂದ ಸುತ್ತಮುತ್ತಲಿನ ಕಚೇರಿ, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜೈಲು ವಿಭಾಗದ ಡಿಜಿ, ಗೃಹ ಸಚಿವರು, ಪೊಲೀಸ್ ಕಮಿಷನರ್ ಗೆ ದೂರಿತ್ತರೂ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರು ತೊಂದರೆ ಎದುರಿಸಿದರೂ ಕಾಂಗ್ರೆಸ್ ಸರ್ಕಾರ ಮೌನ ವಹಿಸಿದೆ. ನಮ್ಮ ಸರ್ಕಾರ ಇರುತ್ತಿದ್ದರೆ ಜೈಲಿಗೆ ನುಗ್ಗಿ ಜಾಮರ್ ಕಿತ್ತು ಬಿಸಾಕುತ್ತಿದ್ದೆ ಎಂದು ಹೇಳಿದರು.

ಈಗಲೂ ನಾವು ಜೈಲಿಗೆ ಹೋಗಲು ಸಿದ್ಧ, ಜೈಲಿನಲ್ಲಿ ಹೇಗೂ ಮೊಬೈಲ್ ಸಿಗುತ್ತದೆ, ತೊಂದ್ರೆ ಇಲ್ಲ ಎಂದು ಹೇಳಿದ ಕಾಮತ್, ಜೈಲಿನ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ಜಾಮರ್ ಅಗತ್ಯವಿದೆಯೇ? ಇವರು ಸರಿಯಾಗಿ ಕೆಲಸ ಮಾಡದ ಕಾರಣಕ್ಕೆ ಜಾಮರ್ ಹಾಕಿದ್ದಾರೆ. ಮೂಗಿನಲ್ಲಿ ನೆಗಡಿ ಆಗಿದೆಯೆಂದು ಮೂಗು ಕತ್ತರಿಸುತ್ತೀರಾ..? ಇದು ಕಾಂಗ್ರೆಸ್ ಸರ್ಕಾರದ ಜನವಿರೋಧಿ ನಡೆಯಲ್ಲವೇ ಎಂದು ಪ್ರಶ್ನಿಸಿದರು. ‌ ಪ್ರತಿಭಟನೆ ಸಭೆಯ ಬಳಿಕ ಕಾರ್ಯಕರ್ತರು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಜೈಲಿನ ಒಳನುಗ್ಗಲು ಯತ್ನಿಸಿದ್ದಾರೆ. ಈ ವೇಳೆ, ಮೊದಲೇ ತಯಾರಾಗಿದ್ದ 50ಕ್ಕೂ ಹೆಚ್ಚು ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

About The Author

Leave a Reply