
ಬೆಂಗಳೂರು : ಒಳ ಮೀಸಲಾತಿ ಬಗ್ಗೆ ಅನುಮಾನ ಬೇಡ. ಜಾರಿ ಮಾಡೇ ಮಾಡುತ್ತೇವೆ. ನೀವು ಬೇಡ ಅಂದರೂ ನಾವು ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.



ವಿಧಾನಸೌಧದ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಶನಿವಾರ ಆಯೋಜಿಸಿದ್ದ ಬಾಬೂ ಜಗಜೀವನ್ ರಾಮ್ ಅವರ 118ನೇ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರ ಮಾತನಾಡಿದ ಅವರು,ಒಳ ಮೀಸಲಾತಿ ಬಗ್ಗೆ ಅನುಮಾನ ಬೇಡ. ಜಾರಿ ಮಾಡೇ ಮಾಡುತ್ತೇವೆ. ನೀವು ಬೇಡ ಅಂದರೂ ನಾವು ಜಾರಿ ಮಾಡುತ್ತೇವೆ. ಸುಪ್ರೀಂಕೋರ್ಟ್ ಆದೇಶವನ್ನು ನಾವು ಶತಪ್ರತಿಶತ ಪಾಲಿಸುತ್ತೇವೆ. ನಾಗಮೋಹನ್ ದಾಸ್ ಅವರು ಎರಡು ತಿಂಗಳ ಕಾಲಾವಧಿ ಕೇಳಿದ್ದಾರೆ, ನಾವು ಕೊಟ್ಟಿದ್ದೇವೆ. ಬಳಿಕ ಯಾರಿಗೂ ಅನ್ಯಾಯ ಆಗದಂತೆ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಬಾಬು ಜಗಜೀವನ್ ರಾಮ್ ಸ್ವಾತಂತ್ರ್ಯ ಪ್ರೇಮಿ, ಸಾಮಾಜಿಕ ನ್ಯಾಯದ ಪರವಾಗಿದ್ದವರು. ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಇದೆ. ಜಾತಿ ಇರುವವರೆಗೂ ಮೀಸಲಾತಿ ಇರಬೇಕು ಎಂದು ಸ್ಪಷ್ಟವಾದ ನಿಲುವು ಹೊಂದಿದ್ದರು. ನರೇಂದ್ರ ಮೋದಿಯವರು EWS ಹೆಸರಲ್ಲಿ ಶೇ10 ಮೀಸಲಾತಿ ಕಲ್ಪಿಸಿದ ಬಳಿಕ ಎಲ್ಲರೂ ಮೀಸಲಾತಿ ಫಲಾನುಭವಿಗಳೇ ಆಗಿಬಿಟ್ಟಿದ್ದಾರೆ. ಮೀಸಲಾತಿ ವಿರುದ್ಧ ಮಾತಾಡುತ್ತಿದ್ದವರೆಲ್ಲಾ ಈಗ ಮೀಸಲಾತಿ ಪಡೆದು ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಈಗ ಮೀಸಲಾತಿ ವಿರೋಧಿಸುವವರು ಯಾರೂ ಇಲ್ಲ ಎಂದರು.