October 13, 2025
WhatsApp Image 2025-04-25 at 4.50.52 PM

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಸೋಮವಾರ ನಡೆದ ಭೀಕರ ಉಗ್ರರ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಭಾರತ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯನ್ನು ಮಾಡಲು ಮುಂದಾಗಿದೆ. ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಹೊರದಬ್ಬುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ  ಸೂಚನೆ ನೀಡಿದ್ದಾರೆ. ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ 48 ಗಂಟೆಗಳ ಒಳಗಾಗಿ ಭಾರತದಿಂದ ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ಬಿಟ್ಟು ತೆರಳುವಂತೆ ಸೂಚನೆ ನೀಡಲಾಗಿತ್ತು. ಪಾಕಿಸ್ತಾದವರ ವೀಸಾವನ್ನು ರದ್ದು ಮಾಡುವಂತೆ ಭಾರತ ಸರ್ಕಾರ ಆದೇಶ ಹೊರಡಿಸಿದೆ.

ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿಗಳನ್ನು ಗುರುತಿಸಿ, ಅವರನ್ನು ವಾಪಸ್ ಕಳುಹಿಸಿ ಎಂದು ಅಮಿತ್‌ ಶಾ ತಿಳಿಸಿದ್ದಾರೆ. ಗಡಿ ರಾಜ್ಯದ ಸಿಎಂಗಳ ಜೊತೆ ಮಾತುಕತೆ ನಡೆಸಿದ ಅವರು ಈ ಕೂಡಲೇ ಪಾಕಿಸ್ತಾನಿಗಳನ್ನು ಹೊರದಬ್ಬಿ ಎಂದು ಆದೇಶವನ್ನು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಐದು ಹಂತದ ರಾಜತಾಂತ್ರಿಕ ಪ್ರತಿದಾಳಿಯ ಭಾಗವಾಗಿ ಪಾಕಿಸ್ತಾನಿ ಪ್ರಜೆಗಳಿಗೆ ಎಲ್ಲಾ ವೀಸಾಗಳನ್ನು ರದ್ದುಗೊಳಿಸಿರುವುದಾಗಿ ಭಾರತ ಬುಧವಾರ ತಿಳಿಸಿದೆ.

ಪಹಲ್ಗಾಮ್‌ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವುದೆ ಎಂದು ಎಂಬುದಕ್ಕೆ ತನ್ನ ಬಳಿ ಪುರಾವೆಗಳಿವೆ ಎಂದು ಭಾರತ ಹೇಳಿದೆ. ಗುರುವಾರ ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಇಟಲಿ, ಫ್ರಾನ್ಸ್, ಜರ್ಮನಿ, ರಷ್ಯಾ ಮತ್ತು ಚೀನಾದ ಹಿರಿಯ ವಿದೇಶಿ ರಾಜತಾಂತ್ರಿಕರಿಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಈ ಪುರಾವೆಯನ್ನು ತೋರಿಸಿದರು. ಸೋಮವಾರ ನಡೆದ ಉಗ್ರರ ಭೀಕರ ದಾಳಿಗೆ ಈ ವರೆಗೆ 26 ಮಂದಿ ಮೃತಪಟ್ಟಿದ್ದಾರೆ. ಬೈಸಾರ್‌ ಕಣಿವೆಯಲ್ಲಿ ಸೇನೆ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಇದೀಗ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಮೂವರು ಶಂಕಿತ ಭಯೋತ್ಪಾದಕರ ರೇಖಾಚಿತ್ರಗಳು ಮತ್ತು ಹೆಸರುಗಳನ್ನು ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಸೇನೆ ಪ್ರಮುಖ ಉಗ್ರನೋರ್ವನನ್ನು ಹೊಡೆದುರುಳಿಸಿದೆ.

ನಿನ್ನೆ ಬಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಉಗ್ರರು ಯಾವುದೇ ಬಿಲದಲ್ಲಿ ಅಡಗಿದ್ದರೂ ನುಗ್ಗಿ ಹೊಡೆಯುತ್ತೇವೆ ಎಂದು ಹೇಳಿದ್ದರು. ಸರ್ವಪಕ್ಷ ಸಭೆಯಲ್ಲಿ ವಿಪಕ್ಷಗಳು ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು.ಈಗಾಗಲೇ ರಾಜತಾಂತ್ರಿಕ ಯುದ್ಧವನ್ನು ಪಾಕ್‌ ಮೇಲೆ ಸಾರಿರುವ ಭಾರತ ಒಂದೊಂದೇ ರೀತಿಯಲ್ಲಿ ಪಾಕ್‌ಗೆ ಶಾಕ್‌ ನೀಡುತ್ತಿದೆ.

About The Author

Leave a Reply