
ಮಂಗಳೂರು: ಸುರತ್ಕಲ್ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಕ್ಕಿ ಸ್ಕೀಂ ಹೆಸರಲ್ಲಿ ಸಾವಿರಾರು ಗ್ರಾಹಕರಿಗೆ 15 ಕೋ.ರೂ. ಅಧಿಕ ವಂಚನೆ ಮಾಡಿದ ಆರೋಪದಲ್ಲಿ ಸುರತ್ಕಲ್ ಮತ್ತು ಬಜ್ಪೆಯ ನಾಲ್ವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ನ್ಯೂ ಶೈನ್ ಎಂಟರ್ ಪ್ರೈಸಸ್ ಎಂಬ ಲಕ್ಕಿ ಸ್ಕೀಮ್ ಮಾಡಿ ವಂಚಿಸಿದ್ದ ಕಾಟಿಪಳ್ಳ ಒಂದನೇ ಬ್ಲಾಕ್‌ನ ಮಹಾಕಾಳಿ ದೈವಸ್ಥಾನ ಬಳಿಯ ನಿವಾಸಿ ಅಹ್ಮದ್ ಖುರೇಶಿ (34), ಕಾಟಿಪಳ್ಳ ಎರಡನೇ ಬ್ಲಾಕ್‌ನ ಕೋರ್ದಬ್ಬು ದ್ವಾರದ ಬಳಿಯ ನಿವಾಸಿ ನಝೀರ್ ಯಾನೆ ನಾಸಿರ್ (39) ಹಾಗೂ ನ್ಯೂ ಇಂಡಿಯಾ ರಾಯಲ್ ಸ್ಕೀಮ್ ಗ್ರೀನ್ ಲೈಟ್ ಲಕ್ಕಿ ಸ್ಕೀಮ್‌ನಲ್ಲಿ ವಂಚನೆ ಮಾಡಿದ್ದ ಬಜ್ಪೆ ನಿವಾಸಿ ಮುಹಮ್ಮದ್ ಅಶ್ರಫ್ (43), ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮುಹಮ್ಮದ್ ಹನೀಫ್ (50) ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಆಯಿಷಾ ಕಟ್ಟಡದಲ್ಲಿರುವ ನ್ಯೂ ಶೈನ್ ಎಂಟರ್ ಪ್ರೈಸಸ್ ಕಚೇರಿಯನ್ನು ಏಕಾಏಕಿ ಬಂದ್ ಮಾಡಿ ಸಾರ್ವಜನಿಕರಿಗೆ ಆಸೆ ಹುಟ್ಟಿಸಿ ವಂಚಿಸಿದ್ದರು. ಇವರ ವಿರುದ್ಧ ಆ.16ರಂದು ಸೂರಿಂಜೆ ನಿವಾಸಿ ಶಿವಪ್ರಸಾದ್ ಎಂಬವರು ದೂರು ನೀಡಿದ್ದರು. ಇದೊಂದು ಅನಿಯಂತ್ರಿತ ಠೇವಣಿ ಯೋಜನೆ ಆಗಿದ್ದು ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಸಾರ್ವಜನಿಕರಿಂದ ನ್ಯೂ ಶೈನ್ ಎಂಟರ್ ಪ್ರೈಸಸ್ ಹೆಸರಿನಲ್ಲಿ ಸುಮಾರು 4 ಕೋಟಿ 20 ಲಕ್ಷಕ್ಕಿಂತ ಅಧಿಕ ಹಣ ಸಂಗ್ರಹಣೆ ಮಾಡಿ ವಂಚನೆಗೈದಿದ್ದಾರೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ 107/2025 ಕಲಂ 316(2), 318(4) ಬಿ.ಎನ್.ಎಸ್ ಮತ್ತು ಕಲಂ 21 ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆ (BUDS Act) ಪ್ರಕಾರ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಅಹಮ್ಮದ್ ಖುರೇಶಿ ಹಾಗೂ ನಜೀರ್ @ ನಾಸೀರ್ ಎಂಬವರನ್ನು ಆ.19ರಂದು ಬಂಧಿಸಿದ್ದು ಪ್ರಕರಣದ ತನಿಖೆಯ ಸಂಬಂಧ ಆ.25 ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಆರೋಪಿಗಳು ಕಾಟಿಪಳ್ಳದ ಆಯಿಷಾ ಕಾಂಪ್ಲೆಕ್ಸ್ ನ ಕಚೇರಿ, ಬಿ.ಎಂ.ಆರ್ ಕಾಂಪ್ಲೆಕ್ಸ್ ನ ಕಚೇರಿ ಹಾಗೂ ಶೈನ್ ಮಾರ್ಟ್ ಕಚೇರಿಯಲ್ಲಿ ಲಕ್ಕಿ ಸ್ಕೀಮ್ ಕೃತ್ಯಕ್ಕಾಗಿ ಉಪಯೋಗಿಸಿದ್ದ ಕಂಪ್ಯೂಟರ್ ಉಪಕರಣಗಳು, ಡ್ರಾ ಕಾಯಿನ್, ಲಕ್ಕಿ ಡ್ರಾ ಪೆಟ್ಟಿಗೆ, ರಿಜಿಸ್ಟರ್ ಗಳು, ಡಿವಿಆರ್ ಗಳನ್ನು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಮನೆ, ಕಚೇರಿಯಲ್ಲಿದ್ದ ಕಂಪ್ಯೂಟರ್ ಉಪಕರಣಗಳನ್ನು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಡ್ಸ್ ಕಾಯ್ದೆಯಂತೆ ಆರೋಪಿತರು ಲಕ್ಕಿ ಸ್ಕೀಮ್ ಹಣದಲ್ಲಿ ಖರೀದಿಸಿದ ಮನೆ, ನಿವೇಶನ, ಫ್ಲಾಟ್, ವಾಹನಗಳು, ಚಿನ್ನಾಭರಣಗಳು ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ, ಉಪ ವಿಭಾಗ ದಂಡಾಧಿಕಾರಿಯವರಿಗೆ, ಕಂದಾಯ ಇಲಾಖೆಯವರಿಗೆ ಪತ್ರ ಬರೆಯಲಾಗಿದೆ. ಸದ್ರಿ ಲಕ್ಕಿ ಸ್ಕೀಮ್ ಗಳಿಗೆ ಸೇರಿದ ಸದಸ್ಯರು ಹಾಗೂ ಸದಸ್ಯರಿಂದ ಹಣ ಸಂಗ್ರಹಣೆ ಮಾಡಿದ ಏಜೆಂಟರು, ಸಂಬಂಧಿಸಿದ ದಾಖಲಾತಿಯೊಂದಿಗೆ ಠಾಣೆಗೆ ಬಂದು ಹೇಳಿಕೆಯನ್ನು ನೀಡುವಂತೆ ಸೂಚಿಸಲಾಗಿದೆ.