
ರಾಜ್ಯದಲ್ಲಿ ಮತ್ತೆ ಮರ್ಯಾದೆ ಹತ್ಯೆ ಸದ್ದು ಮಾಡಿದೆ.ಅನ್ಯಜಾತಿ ಹುಡಗನನ್ನ ಲವ್ ಮಾಡಿದ್ದಕ್ಕೆ ತಂದೆ ತನ್ನ ಸ್ವಂತ 18 ವರ್ಷದ ಮಗಳನ್ನು ಕೊಂದು ಸುಟ್ಟು ಹಾಕಿರುವಂತಹ ಘಟನೆ ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದಲ್ಲಿ ನಡೆದಿದೆ.
ಲಿಂಗಾಯತ ಸಮಾಜದ ಯುವತಿ ಅದೇ ಗ್ರಾಮದ ಕುರುಬ ಸಮಾಜದ ಯುವಕ ಮಾಳಪ್ಪ ಪೂಜಾರಿಯನ್ನು ಪ್ರೀತಿಸುತ್ತಿದ್ದಳು. ಕಲಬುರಗಿ ನಗರಕ್ಕೆ ಪಿಯುಸಿ ಅಧ್ಯಯನಕ್ಕೆ ಬರುತ್ತಿದ್ದ ವೇಳೆ ಪ್ರೀತಿ ಮಾಡಿದ್ದರು. ಮೂರ್ನಾಲ್ಕು ತಿಂಗಳ ಹಿಂದೆ ಮನೆಯವರಿಗೆ ಪ್ರೀತಿ ವಿಷಯ ತಿಳಿದಿದ್ದು, ಕಾಲೇಜು ಬಿಡಿಸಿದ್ದರು.
ಈ ಮಧ್ಯೆ ಕವಿತಾ ಮಾಳಪನನ್ನು ಮದುವೆ ಆಗುತ್ತೇನೆ. ಮದುವೆ ಮಾಡದಿದ್ದರೆ ಓಡಿ ಹೋಗುತ್ತೇನೆ ಎಂದು ಹೇಳಿದ್ದಳು. ಮನೆಯವರು ಅನ್ಯ ಜಾತಿಯ ಯುವಕನನ್ನು ಮದುವೆ ಆಗುವುದನ್ನು ನಿರಾಕರಿಸಿದ್ದು, ಹೆದರಿಸಿದ್ದಾರೆ. ಆದರೂ ಕವಿತಾ ಪಟ್ಟು ಬಿಡದೇ ಮದುವೆ ಆಗುತ್ತೇನೆಂದು ಹಠ ಹಿಡಿದಿದ್ದಳು.
ಈ ನಡುವೆ ಮಧ್ಯರಾತ್ರಿ ಯುವತಿ ತಂದೆ ಶಂಕರ್, ಸಹೋದರ ಶರಣು, ಸಂಬಂಧಿ ದತ್ತು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಕ್ರಿಮಿನಾಶಕ ಸಿಂಪಡಿಸಿ ವಿಷ ಸೇವಿಸಿ, ಮೃತಪಟ್ಟಿದ್ದಾಳೆಂದು ಬಿಂಬಿಸಿದ್ದಾರೆ. ನಂತರ ಬೆಳಗ್ಗೆ 9ಗಂಟೆ ಸುಮಾರಿಗೆ ಗ್ರಾಮದ ಹೊರವಲಯದ ಸಂಬಂಧಿಕರ ಜಮೀನಿನಲ್ಲಿ ದೇಹವನ್ನು ಸುಟ್ಟು ಹಾಕಿದ್ದಾರೆ. ಆದರೆ ಪೊಲೀಸರ ತನೀಖೆಯ ವೇಳೆ ಈ ಘನಘೋರ ಕೃತ್ಯ ಬಯಲಾಗಿದೆ.ಸದ್ಯ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.