April 23, 2026
WhatsApp Image 2026-04-23 at 1.25.22 PM

ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ನಂತರ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಏರಿಕೆ ಆಗಲಿವೆ ಎನ್ನುವಂತಹ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಸರ್ಕಾರ ತತ್​ಕ್ಷಣವೇ ಈ ವಿಚಾರದಲ್ಲಿ ಪ್ರತಿಕ್ರಿಯಿಸಿದೆ. ಪೆಟ್ರೋಲ್ ಬೆಲೆ ಏರಿಕೆಯ ಯಾವ ಸಾಧ್ಯತೆಯೂ ಇಲ್ಲ ಎಂದು ಹೇಳಿರುವ ಪೆಟ್ರೋಲಿಯಂ ಸಚಿವಾಲಯ, ಮಾಧ್ಯಮಗಳಲ್ಲಿ ಬಂದ ವರದಿಯನ್ನು ತಳ್ಳಿ ಹಾಕಿದೆ.

‘ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ ಮಾಡಬಹುದು ಎಂದು ಕೆಲ ವರದಿಗಳು ಹೇಳಿವೆ. ಇಂಥ ಯಾವುದೇ ಪ್ರಸ್ತಾವವು ಸರ್ಕಾರದ ಪರಿಗಣನೆಯಲ್ಲಿ ಇಲ್ಲ. ಜನರಿಗೆ ಭಯ ಮತ್ತು ಆತಂಕ ಹುಟ್ಟಿಸಲು ಈ ವರದಿಗಳನ್ನು ಸೃಷ್ಟಿಸಲಾಗಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಟ್ವೀಟ್ ಮಾಡಿದೆ.

ಮಾಧ್ಯಮಗಳಲ್ಲಿ ಬಂದ ವರದಿ ಏನು ಹೇಳಿದೆ?

ಚುನಾವಣೆಗಳ ಬಳಿಕ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳಲ್ಲಿ ಲೀಟರ್​ಗೆ 25-28 ರೂನಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಕೋಟಕ್ ಇನ್ಸ್​ಟಿಟ್ಯೂಶನಲ್ ಈಕ್ವಿಟೀಸ್ ಸಂಸ್ಥೆಯ ಅಭಿಪ್ರಾಯ ಉಲ್ಲೇಖಿಸಿ ಈ ವರದಿ ಬರೆಯಲಾಗಿದೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿವೆ. ಆದರೆ, ದೇಶದಲ್ಲಿ ರೀಟೇಲ್ ಇಂಧನ ಬೆಲೆಯಲ್ಲಿ ಏರಿಕೆ ಆಗಿಲ್ಲ. ಇದರಿಂದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ತಿಂಗಳಿಗೆ 27,000 ಕೋಟಿ ರೂ ಹೆಚ್ಚುವರಿ ಹೊರೆ ಆಗುತ್ತಿದೆ ಎಂದು ಕೋಟಕ್​ನ ಈ ವರದಿಯಲ್ಲಿ ವಿಶ್ಲೇಷಿಸಲಾಗಿತ್ತು.

ಸರ್ಕಾರ ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸಲ್ ಮೇಲೆ ಅಬಕಾರಿ ಸುಂಕವನ್ನು ಕಡಿತಗೊಳಿಸಿರುವ ಕ್ರಮ ಉಲ್ಲೇಖಿಸಿದ ಕೋಟಕ್ ಇನ್ಸ್​ಟಿಟ್ಯೂಶನಲ್ ಈಕ್ವಿಟೀಸ್​ನ ವರದಿಯು, ಈ ಸುಂಕ ಕಡಿತದಿಂದ ತೈಲ ಕಂಪನಿಗಳಿಗೆ ಒಂದಷ್ಟು ರಿಲೀಫ್ ಕೊಟ್ಟಿವೆಯಾದರೂ, ದೀರ್ಘಕಾಲದ ಪರಿಹಾರ ಸಿಕ್ಕಿಲ್ಲ. ಹೀಗಾಗಿ, ಪೆಟ್ರೋಲ್, ಡೀಸಲ್ ಬೆಲೆ ಏರಿಸಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದೆ.

ಇಂಧನ ಬೆಲೆ ಏರಿಕೆ ಸಾಧ್ಯತೆಯನ್ನು ಸರ್ಕಾರ ಬಲವಾಗಿ ತಳ್ಳಿಹಾಕಿದೆ. ‘ಕಳೆದ 5 ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಏರಿಸದೇ ಇರುವ ಏಕೈಕ ದೇಶ ಭಾರತ. ಅಂತಾರಾಷ್ಟ್ರೀಯ ದರಗಳು ಗಣನೀಯವಾಗಿ ಏರಿಕೆಯಾದರೂ ಭಾರತೀಯ ನಾಗರಿಕರಿಗೆ ಅದರ ಬಿಸಿ ತಾಗದಂತೆ ಭಾರತ ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿವೆ’ ಎಂದು ಪೆಟ್ರೋಲಿಯಂ ಸಚಿವಾಲಯವು ತನ್ನ ಟ್ವೀಟ್​ನಲ್ಲಿ ಹೇಳಿದೆ.

About The Author

Leave a Reply