

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿಯ ಮಾಜಿ ಅಧ್ಯಕ್ಷರು, ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಮಾಜಿ ಮುಖ್ಯ ಸಚೇತಕರಾಗಿದ್ದ ಹಾಜಿ ಕೆ ಎಸ್ ಮೊಹಮ್ಮದ್ ಮಸೂದ್ ಅವರು 90ನೇ ವಸಂತಕ್ಕೆ ಪಾದಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳು ಮಸೂದ್ ಅವರ ನಿವಾಸಕ್ಕೆ ಭೇಟಿ ನೀಡಿ, ಶಾಲು ಹೊದಿಸಿ, ಸನ್ಮಾನಿಸಿ ಶುಭ ಹಾರೈಸಿದರು. ಮನೆಯನ್ನು ಬಲೂನ್‌ಗಳಿಂದ ಅಲಂಕರಿಸಿ, ಹಿರಿಯ ಚೇತನದ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬಡವರ ಮತ್ತು ನಿರ್ಗತಿಕರ ಆಶಾಕಿರಣ
ಹಾಜಿ ಕೆ ಎಸ್ ಮೊಹಮ್ಮದ್ ಮಸೂದ್ ಅವರು ಕೇವಲ ರಾಜಕೀಯ ನಾಯಕರಲ್ಲ. ಬಡವರು ಮತ್ತು ನಿರ್ಗತಿಕರ *ಪಾಲಿಗೆ ಅವರು ನಿಜವಾದ ಆಶಾಕಿರಣ. ದಶಕಗಳ ಕಾಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಅಸಹಾಯಕರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ.
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಧೀಮಂತ ನಾಯಕ
ಸಾಮಾಜಿಕ ಸಾಮರಸ್ಯ, ಧಾರ್ಮಿಕ ಸಹಿಷ್ಣುತೆ ಹಾಗೂ ಶಿಕ್ಷಣ ಕ್ರಾಂತಿಗೆ ಮಸೂದ್ ಅವರ ಕೊಡುಗೆ ಅಪಾರ. ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಅವರು ಹಾಕಿಕೊಟ್ಟ ಭದ್ರ ಬುನಾದಿ ಇಂದಿಗೂ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಕರಾವಳಿ ಭಾಗದಲ್ಲಿ ಸೌಹಾರ್ದತೆಯ ಸೇತುವೆಯಾಗಿ ನಿಂತು, ಎಲ್ಲ ಸಮುದಾಯಗಳ ಪ್ರೀತಿ ಗಳಿಸಿದ ಅಪರೂಪದ ನಾಯಕ ಅವರು.
ಶುಭ ಹಾರೈಕೆ
ಈ ಸಂದರ್ಭದಲ್ಲಿ ಮಾತನಾಡಿದ ರಿಯಾಝ್ ಹರೇಕಳ ಹಾಜಿ ಮಸೂದ್ ಸಾಹೇಬರು ನಮ್ಮೆಲ್ಲರಿಗೂ ಮಾರ್ಗದರ್ಶಕರು. ಸಾಮಾಜಿಕ, ಧಾರ್ಮಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರ *ಹೆಸರು ಅಜರಾಮರ. ಅಲ್ಲಾಹು ಅವರಿಗೆ ಇನ್ನಷ್ಟು ವರ್ಷಗಳ ಕಾಲ ಸಮಾಜ ಸೇವೆ ಮಾಡಲು ದೀರ್ಘಾಯುಷ್ಯ, ಆರೋಗ್ಯ ಕರುಣಿಸಲಿ” ಎಂದು ಪ್ರಾರ್ಥಿಸಿದರು.
90ರ ಹೊಸ್ತಿಲಲ್ಲೂ ಸಮಾಜದ ಬಗ್ಗೆ ಚಿಂತಿಸುವ, ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುವ ಮಸೂದ್ ಅವರ ಬದುಕು ನವ ಪೀಳಿಗೆಗೆ ಸ್ಫೂರ್ತಿ. ಅವರ ಸೇವಾ ಮನೋಭಾವ ಸದಾ ಹೀಗೆಯೇ ಮುಂದುವರಿಯಲಿ ಎಂಬುದೇ ಎಲ್ಲರ ಆಶಯ






