May 7, 2026
WhatsApp Image 2026-05-07 at 2.11.54 PM

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಭರ್ಜರಿ ಜಯ ದಾಖಲಿಸಿರುವ ನಟ ವಿಜಯ್ ಅವರ ‘ತಮಿಳುಗ ವೆಟ್ರಿ ಕಳಗಂ’ (TVK) ಅಧಿಕಾರದ ಗದ್ದುಗೆ ಏರಲು ಕೊನೆಯ ಹಂತದ ಕಾನೂನು ಮತ್ತು ಸಂಖ್ಯಾಬಲದ ಹೋರಾಟ ನಡೆಸುತ್ತಿದೆ. ಗುರುವಾರ ಬೆಳಿಗ್ಗೆ ವಿಜಯ್ ಅವರನ್ನು ರಾಜಭವನಕ್ಕೆ ಕರೆಸಿಕೊಂಡ ರಾಜ್ಯಪಾಲ ಆರ್‌ವಿ ಅರ್ಲೇಕರ್, ಮೊದಲು 118 ಶಾಸಕರ ಬೆಂಬಲವಿರುವ ಅಧಿಕೃತ ಪತ್ರ ತನ್ನಿ ಎಂದು ಕಠಿಣ ಷರತ್ತು ವಿಧಿಸಿದ್ದಾರೆ.

ಸುಮಾರು ಎರಡು ದಿನಗಳಲ್ಲಿ ಎರಡನೇ ಬಾರಿಗೆ ರಾಜ್ಯಪಾಲರನ್ನು ಭೇಟಿಯಾದ ವಿಜಯ್ ಅವರಿಗೆ ಸಂವಿಧಾನದ ಚೌಕಟ್ಟಿನೊಳಗೆ ಹಲವು ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಕೇವಲ 113 ಶಾಸಕರನ್ನು (ಟಿವಿಕೆ 108 + ಕಾಂಗ್ರೆಸ್ 5) ಇಟ್ಟುಕೊಂಡು ಸರ್ಕಾರ ಹೇಗೆ ನಡೆಸುತ್ತೀರಿ? ಎನ್ನುವ ಪ್ರಶ್ನೆ ಕೇಳಲಾಗಿದೆ.

ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಪಿಎಂಕೆ ಪಕ್ಷಗಳ ಬೆಂಬಲದೊಂದಿಗೆ ನಮ್ಮ ಸಂಖ್ಯಾಬಲ 123 ಕ್ಕೆ ಏರಲಿದೆ. ಬಹುಮತ ಸಾಬೀತುಪಡಿಸಲು ನಾನು ಸಿದ್ಧ ಎಂದು ವಿಜಯ್ ಹೇಳಿದ್ದಾರೆ.

ರಾಜ್ಯಪಾಲರು ಮಾತ್ರ ಕೇವಲ ಬಾಯಿಮಾತಿನ ಭರವಸೆಗೆ ಒಪ್ಪುತ್ತಿಲ್ಲ. ಮೇಜಿನ ಮೇಲೆ ಭೌತಿಕವಾಗಿ ಬೆಂಬಲ ಪತ್ರಗಳಿಲ್ಲದ ಹೊರತು ಪ್ರಮಾಣವಚನಕ್ಕೆ ಅವಕಾಶ ನೀಡುವುದಿಲ್ಲ ಎಂದು ಅರ್ಲೇಕರ್ ಪಟ್ಟು ಹಿಡಿದಿದ್ದಾರೆ. ವಿಜಯ್ ಅವರ ಮುಂದಿರುವ ಅತಿದೊಡ್ಡ ಸವಾಲೆಂದರೆ ತಮ್ಮ ಮೈತ್ರಿಕೂಟದ ಪಕ್ಷಗಳನ್ನು ಒಗ್ಗೂಡಿಸುವುದು. ಬಿಜೆಪಿ ಜೊತೆ ಟಿವಿಕೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು ಎಂಬ ಷರತ್ತಿನ ಮೇಲೆ ಕಾಂಗ್ರೆಸ್ ಬೆಂಬಲ ನೀಡಿದೆ.

ವಿಸಿಕೆ ಮತ್ತು ಪಿಎಂಕೆ ಗೊಂದಲ:

ವಿಸಿಕೆ ಸದ್ಯ ಡಿಎಂಕೆ ಜೊತೆಗಿದ್ದರೆ, ಪಿಎಂಕೆ ಬಿಜೆಪಿಯ ಮಿತ್ರಪಕ್ಷವಾಗಿದೆ. ವಿಜಯ್ ಜೊತೆ ಸೇರಬೇಕೆಂದರೆ ಈ ಎರಡೂ ಪಕ್ಷಗಳು ತಮ್ಮ ಹಾಲಿ ಮೈತ್ರಿಕೂಟದಿಂದ ಹೊರಬರಬೇಕಿದೆ. ಒಂದು ವೇಳೆ ಈ ಎಲ್ಲಾ ಪಕ್ಷಗಳು ಒಂದಾದರೆ ವಿಜಯ್ ಅವರ ಸಂಖ್ಯಾಬಲ 122 (ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ನಂತರ) ತಲುಪಲಿದೆ.

ಇನ್ನೊಂದೆಡೆ, ಎಐಎಡಿಎಂಕೆಯ ಒಂದು ಬಣ ವಿಜಯ್ ಅವರಿಗೆ ಬೆಂಬಲ ನೀಡಲು ಉತ್ಸುಕವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸುಮಾರು ಒಂದು ಡಜನ್ ಎಐಎಡಿಎಂಕೆ ಶಾಸಕರು ಪುದುಚೇರಿಯ ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ. ಆದರೆ, ಪಕ್ಷದ ಹಿರಿಯ ನಾಯಕರಾದ ಇಪಿಎಸ್ ಮತ್ತು ಕೆಪಿ ಮುನುಸಾಮಿ ಅವರು ಮೈತ್ರಿಯ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಈ ಅನಿಶ್ಚಿತತೆಯ ನಡುವೆ, ಯಾವುದೇ ಆಪರೇಷನ್ ನಡೆಯಬಾರದೆಂಬ ಮುನ್ನೆಚ್ಚರಿಕೆಯಿಂದ ವಿಜಯ್ ತಮ್ಮ 107 ಶಾಸಕರನ್ನು ಮಾಮಲ್ಲಪುರಂನ ರೆಸಾರ್ಟ್‌ನಲ್ಲಿ ಸುರಕ್ಷಿತವಾಗಿ ಇರಿಸಿದ್ದಾರೆ.

ಮುಂದೇನು? ರಾಷ್ಟ್ರಪತಿ ಆಳ್ವಿಕೆಯ ಭೀತಿ 

ಸದ್ಯಕ್ಕೆ ಟಿವಿಕೆ ನ್ಯಾಯಾಲಯದ ಮೊರೆ ಹೋಗುವ ನಿರ್ಧಾರ ಮಾಡಿಲ್ಲ. ಬದಲಾಗಿ ರಾಜಕೀಯವಾಗಿ ಸಂಖ್ಯಾಬಲ ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ. ಒಂದು ವೇಳೆ ವಿಜಯ್ ಅವರಿಗೆ ಮೈತ್ರಿಕೂಟವನ್ನು ಭದ್ರಪಡಿಸಲು ಸಾಧ್ಯವಾಗದಿದ್ದರೆ, ರಾಜ್ಯಪಾಲರು ಅನಿವಾರ್ಯವಾಗಿ ವಿಧಾನಸಭೆಯನ್ನು ಅಮಾನತುಗೊಳಿಸಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು. ಇದು ರಾಜ್ಯವನ್ನು ಮತ್ತೆ ಚುನಾವಣೆಯತ್ತ ತಳ್ಳುವ ಸಾಧ್ಯತೆಯಿದೆ.

About The Author

Leave a Reply