

ಬಳ್ಳಾರಿ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಜಿಲ್ಲೆಯ ಎಸ್ಪಿ ಗನ್ ಮ್ಯಾನ್ನಿಂದಲೇ 3 ಲಕ್ಷ ರೂ. ಹಣ ವಸೂಲಿ ನಡೆದಿದೆ. ಅಕ್ರಮ ಪಡಿತರ ಅಕ್ಕಿ ಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಎಸ್ಪಿ ಸುಮನ್ ಡಿ. ಪನ್ನೇಕರ್ ಅವರ ಗನ್ ಮ್ಯಾನ್ ದೇವರಾಜ್ ಬಂಧನಕ್ಕೊಳಗಾಗಿದ್ದು, ಅಕ್ರಮ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ಶರಭಯ್ಯ ಎಂಬುವವರಿಂದ ಹಣ ವಸೂಲಿ ಮಾಡಿದ ಆರೋಪದಡಿ ದೇವರಾಜ್ ಹಾಗೂ ಆತನ ಸಹಚರರನ್ನು ಮೋಕಾ ಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದೇನು?
ಮಡಕೇರಿಯಿಂದ ಆಂಧ್ರಪ್ರದೇಶದತ್ತ ಪಡಿತರ ಅಕ್ಕಿ ತುಂಬಿಕೊಂಡು ತೆರಳುತ್ತಿದ್ದ ಎರಡು ಲಾರಿಗಳನ್ನು ಅಡ್ಡಗಟ್ಟಿದ್ದ ಆರೋಪಿಗಳು, ತಾವು ಎಸ್ಪಿ ಸ್ಕ್ವಾಡ್ ಅಧಿಕಾರಿಗಳು ಎಂದು ಹೇಳಿ ಐದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ ಮೂರು ಲಕ್ಷ ರೂ. ವಸೂಲಿ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಣ ನೀಡದಿದ್ದರೆ ಲಾರಿಗಳನ್ನು ಸೀಜ್ ಮಾಡಿ ಜೈಲಿಗೆ ಕಳುಹಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಯೆಂದು ಶರಭಯ್ಯ ಮೋಕಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿಗಳ ವಿಚಾರಣೆ
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಗನ್ ಮ್ಯಾನ್ ದೇವರಾಜ್ ಎಸ್ಪಿ ಸ್ಕ್ವಾಡ್ ಹೆಸರಿನಲ್ಲಿ ಹಣ ವಸೂಲಿ ಮಾಡಿರುವುದು ಖಚಿತವಾಗಿದೆ. ಈ ಹಿನ್ನೆಲೆ ಎಸ್ಪಿ ಸುಮನ್ ಡಿ. ಪನ್ನೇಕರ್ ಅವರೇ ಕ್ರಮ ಕೈಗೊಂಡು ದೇವರಾಜ್ ಬಂಧನಕ್ಕೆ ಸೂಚನೆ ನೀಡಿದ್ದಾರೆ. ಸದ್ಯ ಮೋಕಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ.






