May 13, 2026
WhatsApp Image 2026-05-13 at 11.29.46 AM (1)

ಮಂಗಳೂರು : ರಾಜ್ಯದ ವಿವಿಧ ಭಾಗಗಳಲ್ಲಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ದ್ರವ್ಯ ಜಾಲಗಳು ನಡೆಸುತ್ತಿರುವ ಅಕ್ರಮ ಚಟುವಟಿಕೆಗಳು ಸಮಾಜದಲ್ಲಿ ತೀವ್ರ ಆತಂಕವನ್ನುಂಟು ಮಾಡಿವೆ. ವಿಶೇಷವಾಗಿ ವಿದ್ಯಾರ್ಥಿನಿಯರನ್ನೇ ಡ್ರಗ್ಸ್ ಮಾರಾಟ ಮತ್ತು ಸಾಗಣೆಂತಹ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿರುವುದು ಅತ್ಯಂತ ಖಂಡನೀಯ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜನತಾದಳ (ಜಾ) ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ ಹಾಗೂ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಬೇಕಾದ ಯುವಜನತೆಯನ್ನು ಕೆಲ ದುಷ್ಕರ್ಮಿಗಳು ಹಣದ ಆಸೆ, ಆಮಿಷ ಮತ್ತು ಒತ್ತಡಗಳ ಮೂಲಕ ಮಾದಕ ಜಾಲಕ್ಕೆ ಸೆಳೆದು ಅವರ ಬದುಕನ್ನೇ ಹಾಳುಮಾಡುತ್ತಿರುವುದು ಸಮಾಜದ ಭವಿಷ್ಯಕ್ಕೂ ಗಂಭೀರ ಅಪಾಯಕಾರಿಯಾಗಿದೆ. ವಿದ್ಯಾರ್ಥಿಗಳ ಮನಸ್ಥಿತಿ, ಆರ್ಥಿಕ ಸಂಕಷ್ಟ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಅವರನ್ನು ವ್ಯಸನದ ದಾರಿಗೆ ತಳ್ಳುತ್ತಿರುವ ಜಾಲಗಳ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ತನಿಖಾ ಸಂಸ್ಥೆಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಶೇಷವಾಗಿ ವಿದ್ಯಾರ್ಥಿನಿಯರನ್ನು ಬೆದರಿಕೆ, ಮೋಸ ಹಾಗೂ ಆಮಿಷಗಳ ಮೂಲಕ ಡ್ರಗ್ಸ್ ಮಾರಾಟ ಮತ್ತು ಸಾಗಣೆಂತಹ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕೇವಲ ಸಣ್ಣ ಮಟ್ಟದ ಆರೋಪಿಗಳನ್ನು ಬಂಧಿಸುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಇದರ ಹಿಂದೆ ಕಾರ್ಯನಿರ್ವಹಿಸುತ್ತಿರುವ ನಿಜವಾದ ಕಿಂಗ್‌ಪಿನ್‌ಗಳು, ಹಣಕಾಸು ಪೂರೈಕೆದಾರರು ಹಾಗೂ ಸಂಘಟಿತ ಜಾಲಗಳನ್ನು ಪತ್ತೆಹಚ್ಚಿ ಬೇರು ಸಮೇತ ಕಿತ್ತುಹಾಕುವ ಕಾರ್ಯ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಾದ್ಯಂತ ವ್ಯಾಪಕವಾಗಿ ಹರಡಿರುವ ಇಂತಹ ಮಾದಕ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಪೊಲೀಸ್ ಇಲಾಖೆ, ಮಾದಕ ದ್ರವ್ಯ ನಿಯಂತ್ರಣ ವಿಭಾಗ ಹಾಗೂ ಇತರ ತನಿಖಾ ಸಂಸ್ಥೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ. ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ ಕಟ್ಟುನಿಟ್ಟಿನ ನಿಗಾ ವಹಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಪೋಷಕರಿಗೂ ಅಗತ್ಯ ಮಾರ್ಗದರ್ಶನ ನೀಡುವುದು ಕಾಲದ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

“ವಿದ್ಯಾರ್ಥಿಗಳು ದೇಶದ ಭವಿಷ್ಯ. ಅವರ ಬದುಕಿನೊಂದಿಗೆ ಆಟವಾಡುವ ಸಮಾಜಘಾತುಕ ಶಕ್ತಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಇಂತಹ ದುಷ್ಕರ್ಮಿಗಳನ್ನು ಜೈಲಿಗಟ್ಟುವುದರ ಜೊತೆಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಯುವಜನರ ಬದುಕನ್ನು ಕತ್ತಲೆಗೆ ತಳ್ಳುತ್ತಿರುವ ಮಾದಕ ಜಾಲದ ವಿರುದ್ಧ ಸಮಾಜವೇ ಒಗ್ಗಟ್ಟಾಗಿ ಹೋರಾಡಬೇಕಾಗಿದೆ” ಎಂದು ಜಾಕೆ ಮಾಧವ ಗೌಡ ಹಾಗೂ ಯೋಗಿಶ್ ಶೆಟ್ಟಿ ಜಪ್ಪು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply