May 22, 2026
IMG-20260522-WA0000

ಮಂಗಳೂರು: ಮೊನ್ನೆ ಕಾಣೆಯಾಗಿದ್ದ ಗೂಡಿನಬಳಿಯ ಯುವಕ ಇರ್ಫಾನ್ ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಇರ್ಫಾನ್‌ಗಾಗಿ ಕುಟುಂಬಸ್ಥರು ಮತ್ತು ಸ್ಥಳೀಯರು ಶೋಧ ನಡೆಸುತ್ತಿದ್ದರು. ಸದ್ಯ ಯುವಕನ ಮರಣವು ಹೇಗೆ ಸಂಭವಿಸಿದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಇದು ಸಂಶಯಾಸ್ಪದ ಸಾವು ಆಗಿರುವುದರಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ದೇರಳಕಟ್ಟೆಯ ಕನಚೂರು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ಈ ದುರ್ಘಟನೆಗೆ ಸಾಮಾಜಿಕ ಕಾರ್ಯಕರ್ತ ರಿಯಾಝ್ ಹರೇಕಳ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಮರ್ಹೂಮ್ ಇರ್ಫಾನ್ ಅವರ ಅಗಲಿಕೆ ನೋವು ತರಿಸಿದೆ. ಮನೆಯವರಿಗೆ ಈ ದುಃಖವನ್ನು ಭರಿಸುವ ತಾಳ್ಮೆ ಹಾಗೂ ಸಹಿಸುವ ಶಕ್ತಿಯನ್ನು ಅಲ್ಲಾಹು ಕರುಣಿಸಲಿ. ಅಲ್ಲಾಹು ಮರ್ಹೂಮ್‌ಗೆ ಮಗ್ಫಿರತ್ ಮತ್ತು ಜನ್ನತುಲ್ ಫಿರ್ದೌಸ್ ದಯಪಾಲಿಸಲಿ” ಎಂದು ಅವರು ಪ್ರಾರ್ಥಿಸಿದ್ದಾರೆ. ಜೊತೆಗೆ, ಈ ಪ್ರಕರಣದ ಬಗ್ಗೆ ಕೂಲಂ ಕುಶ ತನಿಖೆ ನಡೆಸಬೇಕು ಎಂದು ರಿಯಾಝ್ ಹರೇಕಳ ಅವರು ಒತ್ತಾಯಿಸಿದ್ದಾರೆ. ಯುವಕನ ಸಾವಿನ ಹಿಂದಿನ ನೈಜ ಕಾರಣವನ್ನು ಹೊರತರಲು ಪೊಲೀಸ್ ಇಲಾಖೆ ತ್ವರಿತ ಮತ್ತು ಪಾರದರ್ಶಕ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇರ್ಫಾನ್ ಅವರ ಅಕಾಲಿಕ ನಿಧನ ಗೂಡಿನಬಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ವಾತಾವರಣ ಮೂಡಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

About The Author

Leave a Reply