

ಕಲಬುರಗಿ : ಲಾರಿ ಮತ್ತು ಕ್ರೂಸರ್ ವಾಹನಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಹಾಗೂ ಹಲಕರ್ಟಿ ಮಧ್ಯೆ ಶನಿವಾರ ಬೆಳಗಿನ ಜಾವ ಈ ದುರಂತ ಸಂಭವಿದೆ. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-150ರಲ್ಲಿ ಈ ಹೃದಯವಿದ್ರಾವಕ ದುರಂತ ಜರುಗಿದೆ.ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಇಂಗಳಗಿ ಗ್ರಾಮದ ನಿವಾಸಿಗಳು ಮತ್ತುಸಂಬಧಿಕರು ಎಂದು ತಿಳಿದುಬಂದಿದೆ. ಮೃತರನ್ನು ಮೆಹಬೂಬ್ ಅಲಿ (42), ತೊಲಾ ಬಾಷಾ (30), ಹುಸೇನ್ ಶಾಹಾಪುರ (47), ರಸೂಲಬಿ (43) ಹಾಗೂ ಫಾತಿಮಾ (40) ಎಂದು ಗುರುತಿಸಲಾಗಿದೆ. ಶನಿವಾರ ಮುಂಜಾನೆ ಯಾದಗಿರಿಯಿಂದ ಇಂಗಳಗಿ ಗ್ರಾಮದ ಕಡೆಗೆ ಕ್ರೂಸರ್ ವಾಹನವು ತೆರಳುತ್ತಿತ್ತು. ಇದೇ ವೇಳೆ ವಾಡಿಯಿಂದ ಯಾದಗಿರಿ ಕಡೆಗೆ ಅತಿವೇಗವಾಗಿ ಧಾವಿಸುತ್ತಿದ್ದ ಲಾರಿ (ಟ್ಯಾಂಕರ್) ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಕ್ರೂಸರ್ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಐವರ ದೇಹಗಳು ರಸ್ತೆಯುದ್ದಕ್ಕೂ ಛಿದ್ರ ಛಿದ್ರಗೊಂಡು ಸ್ಥಳದಲ್ಲೇ ಜೀವಬಿಟ್ಟಿದ್ದಾರೆ.






