

ಬಿಜ್ನೋರ್: ಕಳ್ಳರು ಬಂದು ಹಣ ದೋಚುವುದು, ದರೋಡೆಕೋರರು ಬ್ಯಾಗ್ ಕಿತ್ತುಕೊಂಡು ಓಡುವುದು ಸಾಮಾನ್ಯ. ಆದರೆ, ಇಲ್ಲೊಂದು ಬೀದಿನಾಯಿ ಸಾರ್ವಜನಿಕರ ಕಣ್ಣೆದುರೇ ಬರೋಬ್ಬರಿ ₹1 ಲಕ್ಷ ನಗದು ಹಣವಿದ್ದ ಪ್ಲಾಸ್ಟಿಕ್ ಕವರನ್ನು ಬೈಕ್‌ನಿಂದ ಅತ್ಯಂತ ಚಾಣಾಕ್ಷತನದಿಂದ ಹೊತ್ತೊಯ್ದಿರುವ ವಿಲಕ್ಷಣ ಘಟನೆಯೊಂದು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.ಬುಲ್ಲಾ ಚೌಕ ನಿವಾಸಿ, ಪಶು ವೈದ್ಯಕೀಯ ಮೆಡಿಕಲ್ ಸ್ಟೋರ್ ಮಾಲೀಕ ನವಾಬ್ ಅಹಮದ್ ಎಂಬುವವರೇ ಈ ವಿಚಿತ್ರ ಕಳ್ಳತನಕ್ಕೆ ಒಳಗಾದ ದುರ್ದೈವಿ. ಶನಿವಾರ ಮಧ್ಯಾಹ್ನ ಶಂಭಾ ಬಜಾರ್‌ನ ಕಿಲ್ಲೆ ವಾಲಿ ಮಸೀದಿಗೆ ನಮಾಜ್ ಮಾಡಲು ನವಾಬ್ ಬಂದಿದ್ದರು. ತಮ್ಮ ದ್ವಿಚಕ್ರ ವಾಹನವನ್ನು ಮಸೀದಿಯ ಸಮೀಪದ ಗಲ್ಲಿಯೊಂದರಲ್ಲಿ ನಿಲ್ಲಿಸಿದ್ದರು.ಮೆಡಿಕಲ್ ಸ್ಟೋರ್‌ನ ಕಲೆಕ್ಷನ್ ಹಣವಾದ ₹1 ಲಕ್ಷ ನಗದು ಹಣವನ್ನು ಕಪ್ಪು ಪ್ಲಾಸ್ಟಿಕ್ ಕವರಿನಲ್ಲಿ ಸಾರಿಟ್ಟುಕೊಂಡಿದ್ದ ನವಾಬ್, ಅದನ್ನು ಬೈಕ್‌ನ ಸೈಡ್ ಬ್ಯಾಗ್‌ನಲ್ಲಿ ಇಟ್ಟಿದ್ದರು. ಆದರೆ, ಧಾವಂತದಲ್ಲಿ ಸೈಡ್ ಬ್ಯಾಗ್‌ನ ಜಿಪ್ ಲಾಕ್ ಮಾಡಲು ಮರೆತಿದ್ದರು. ನವಾಬ್ ಮಸೀದಿಯೊಳಗೆ ಹೋಗುತ್ತಿದ್ದಂತೆಯೇ ಅಲ್ಲಿಗೆ ಬಂದ ಕಪ್ಪು ಬಣ್ಣದ ಬೀದಿನಾಯಿಯೊಂದು, ಬ್ಯಾಗ್‌ನೊಳಗೆ ಮೂತಿ ಹಾಕಿ ಅತ್ಯಂತ ಕೌಶಲದಿಂದ ಹಣದ ಕವರನ್ನು ಕಚ್ಚಿ ಹೊರತೆಗೆದಿದೆ. ಕವರಿನೊಳಗೆ ಏನೋ ತಿಂಡಿ ಇರಬಹುದೆಂದು ಭಾವಿಸಿದ ಶ್ವಾನ, ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತಿದೆ.ನಮಾಜ್ ಮುಗಿಸಿ ಮರಳಿದ ನವಾಬ್ ಬೈಕ್ ಬ್ಯಾಗ್ ಖಾಲಿಯಾಗಿರುವುದನ್ನು ಕಂಡು ದಿಕ್ಕೆಟ್ಟಿದ್ದಾರೆ. ಯಾರೋ ಕಳ್ಳರು ಕೈಚಳಕ ತೋರಿದ್ದಾರೆ ಎಂದು ಭಾವಿಸಿ ತಕ್ಷಣವೇ ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ನಾಯಿ ನಡೆಸಿರುವ ಈ ವಿಚಿತ್ರ ಸಾಹಸ ಕಂಡು ಸ್ವತಃ ನವಾಬ್ ಮತ್ತು ಪೊಲೀಸರು ದಂಗಾಗಿದ್ದಾರೆ.“ನಾಯಿ ಹಣದ ಕವರನ್ನು ಕಚ್ಚಿಕೊಂಡು ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಆದರೆ ಅದು ಆ ಹಣವನ್ನು ಎಲ್ಲಿ ತೆಗೆದುಕೊಂಡು ಹೋಗಿ ಹಾಕಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಕಾಗದದ ನೋಟುಗಳನ್ನು ತಿನ್ನಲು ಸಾಧ್ಯವಾಗದೆ ಎಲ್ಲೋ ರಸ್ತೆಯ ಬದಿಯಲ್ಲಿ ಅಥವಾ ಚರಂಡಿಯಲ್ಲಿ ಎಸೆದಿರುವ ಸಾಧ್ಯತೆಯಿದ್ದು, ನವಾಬ್ ತಮ್ಮ ಕಷ್ಟದ ಹಣಕ್ಕಾಗಿ ಇಡೀ ನಗರದ ಗಲ್ಲಿ ಗಲ್ಲಿಗಳಲ್ಲಿ ನಾಯಿಯನ್ನು ಹುಡುಕುತ್ತಿದ್ದಾರೆ,” ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ಮತ್ತು ಅವುಗಳ ಕಡಿತದಿಂದ ಮನುಷ್ಯರು ಹೇಗೋ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ. ಆದರೆ, ಇದೀಗ ನಾಯಿಗಳನ್ನು ಮುಂದಿಟ್ಟುಕೊಂಡು ಹಗಲು ದರೋಡೆ ಮಾಡುವ ಕೆಲವು ವಿಕೃತ ಮನಸ್ಸಿನ ಗ್ಯಾಂಗ್‌ಗಳು ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದೆ.






