

ಬಂಟ್ವಾಳ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಮನೆಯೊಂದು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಕುಮ್ಡೇಲು ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಇಲ್ಲಿನ ನಿವಾಸಿ ಸುನಿಲ್ ಎಂಬುವವರ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಈ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಆದರೆ, ಮನೆಯಲ್ಲಿದ್ದ ಎಲ್ಲಾ ಗೃಹಬಳಕೆಯ ವಸ್ತುಗಳು ಹಾಗೂ ಅಗತ್ಯ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.ಸುನಿಲ್ ಅವರು ಪ್ರಸ್ತುತ ಹೊಸ ಮನೆಯೊಂದನ್ನು ನಿರ್ಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರು ತಮ್ಮ ಕುಟುಂಬದೊಂದಿಗೆ ಹೊಸ ಮನೆಯ ಪಕ್ಕದಲ್ಲೇ ಹಂಚು ಮತ್ತು ಶೀಟ್ ಬಳಸಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ನಲ್ಲಿ ವಾಸಿಸುತ್ತಿದ್ದರು.ಮನೆಯಿಂದ ಬೆಂಕಿ ಮತ್ತು ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿ, ಅವರೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವಷ್ಟರಲ್ಲೇ, ಮನೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿತ್ತು. ಇದರಿಂದಾಗಿ ಕುಟುಂಬಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.







