

ಮಂಗಳೂರು: ಪಶ್ಚಿಮ ಕರಾವಳಿಯುದ್ದಕ್ಕೂ ಮೀನುಗಾರಿಕೆ ಚಟುವಟಿಕೆಗಳು ಇಂದಿನಿಂದ ಬಹುತೇಕ ಸ್ಥಗಿತಗೊಳ್ಳಲಿವೆ. ಮಳೆಗಾಲವು ಮೀನುಗಳ ಸಂತಾನೋತ್ಪತ್ತಿಯ ಕಾಲವಾಗಿದೆ. ಅವುಗಳ ರಕ್ಷಣೆಗಾಗಿ 61 ದಿನಗಳ ಕಾಲ ಯಾಂತ್ರೀಕೃತ ಬೋಟ್‌ಗಳು ಸಮುದ್ರಕ್ಕೆ ಇಳಿಯದಂತೆ ನಿರ್ಬಂಧಿಸಲಾಗಿದೆ.ಹೆಚ್ಚಿನ ಕಡಲ ಪ್ರಭೇದಗಳು ಮೊಟ್ಟೆಯಿಡುತ್ತವೆ. ಹೀಗಾಗಿ ಮುಂಗಾರು ತಿಂಗಳುಗಳಲ್ಲಿ ಮೀನುಗಳನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಈ ನಿಷೇಧವನ್ನು ಹೇರಲಾಗಿದೆ. ಈ ಅವಧಿಯಲ್ಲಿ ಯಾಂತ್ರೀಕೃತ ದೋಣಿಗಳ ಕಾರ್ಯಾಚರಣೆಯು ಮೀನಿನ ಸಂತಾನೋತ್ಪತ್ತಿಗೆ ಅಡ್ಡಿಪಡಿಸಬಹುದು ಮತ್ತು ಭವಿಷ್ಯದ ಮೀನುಗಾರಿಕೆಯ ಮೇಲೆ ಭಾರಿ ಹೊಡೆತ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಅವಧಿಯಲ್ಲಿ ಯಾಂತ್ರಿಕ ದೋಣಿಗಳು ಸಮುದ್ರಕ್ಕೆ ಇಳಿದರೆ ಮೀನುಗಳ ಸಂತಾನೋತ್ಪತ್ತಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆ ದ.ಕ. ಜಿಲ್ಲೆಯಲ್ಲಿ 61 ದಿನಗಳ ಕಾಲ ನಿಷೇಧ ಹೇರಲಾಗಿದೆ. ಈ ಅವಧಿಯಲ್ಲಿ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಹೆಚ್ಚಿನ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳು ಮುಂದಿನ ಎರಡು ತಿಂಗಳ ಕಾಲ ಸ್ಥಗಿತಗೊಳ್ಳುವ ನಿರೀಕ್ಷೆಯಿದೆ.ಸಾಂಪ್ರದಾಯಿಕ ದೋಣಿಗಳ ಮೀನುಗಾರಿಕೆ ಮುಂದುವರಿಕೆಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿದ್ದರೂ ಸಾಂಪ್ರದಾಯಿಕ ನಾಡದೋಣಿಗಳಿಗೆ ಮೀನುಗಾರಿಕೆ ಮುಂದುವರಿಸಲು ಅನುಮತಿ ನೀಡಲಾಗಿದೆ. ನಾಡದೋಣಿ ಮತ್ತು ಬಲೆಗಳನ್ನು ಬಳಸುವ ಮೀನುಗಾರರು 10 ಅಶ್ವಶಕ್ತಿಯ ಇಂಜಿನ್ ಬಳಸಿ ಸಮುದ್ರದ ಬದಿ, ನದಿ ತೀರದಲ್ಲಿ ಮೀನುಗಾರಿಕೆ ನಡೆಸಬಹುದಾಗಿದೆ.ಕಳೆದ ಬಾರಿ ಮಂಗಳೂರು ದಕ್ಕೆಯಲ್ಲಿ ಮೀನು ಉತ್ಪಾದನೆಯು ತೀವ್ರ ಕುಸಿತ ಕಂಡಿದ್ದರೆ ಈ ಬಾರಿ ತುಸು ಚೇತರಿಕೆ ಕಂಡುಬಂದಿದೆ. ಅಂದಹಾಗೆ ಇತ್ತೀಚಿನ ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಪೆಟ್ರೋಲ್-ಡೀಸೆಲ್ ಪೂರೈಕೆ ವ್ಯತ್ಯಯ, ದರ ಏರಿಕೆ ಇತ್ಯಾದಿಯು ಮೀನಿನ ದರದ ಮೇಲೆ ಒಂದಷ್ಟು ಪರಿಣಾಮ ಬೀರಿತ್ತು. ಆದರೂ ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ಮೀನುಗಾರಿಕೆ ನಡೆದಿರುವುದು ವಿಶೇಷ ಎಂದು ಅಧಿಕಾರಿಗಳು ಹೇಳಿದ್ದಾರೆ.2023-24ನೇ ಸಾಲಿನ ಮಾರ್ಚ್ನಲ್ಲಿ 6,792 ಮೆಟ್ರಿಕ್ ಟನ್, 2024-25ರಲ್ಲಿ 6,890 ಮೆಟ್ರಿಕ್ ಟನ್ ಮೀನು ಲಭ್ಯವಾಗಿದ್ದರೆ, 2025-26ರಲ್ಲಿ 19,890 ಮೆಟ್ರಿಕ್ ಟನ್ ಮೀನು ಲಭ್ಯವಾಗಿದೆ. 2023-24ನೇ ಸಾಲಿನಲ್ಲಿ 3,976 ಕೋ.ರೂ. ಮೌಲ್ಯದ 2,39,758 ಟನ್ ಮೀನು ಲಭಿಸಿದ್ದರೆ, 2024-25ನೇ ಸಾಲಿನಲ್ಲಿ 2,220 ಕೋ.ರೂ. ಮೌಲ್ಯದ 1,71,795 ಟನ್ ಮೀನು ಸಿಕ್ಕಿತ್ತು. 2025-26ನೇ ಸಾಲಿನಲ್ಲಿ 3,856 ಕೋ.ರೂ. ಮೌಲ್ಯದ 1,97,381 ಟನ್ ಮೀನು ಲಭ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇದೀಗ ಒಂದನೇ ಮತ್ತು ಮೂರನೇ ಹಂತದ ಮೀನುಗಾರಿಕಾ ದಕ್ಕೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಹಾಗಾಗಿ ಮೀನುಗಾರಿಕಾ ಚಟುವಟಿಕೆ ಮುಗಿಸಿ ಮರಳುತ್ತಿರುವ ಬೋಟ್‌ಗಳಿಗೆ ಲಂಗರು ಹಾಕು ವುದು ಸವಾಲಾಗಿ ಪರಿಣಮಿಸಿದೆ. ಅಭಿವೃದ್ಧಿ ಕಾಮಗಾರಿಯಿಂದಾಗಿ 1,400 ಮೀ. ಉದ್ದದ ದಕ್ಕೆಯಲ್ಲಿ ಇದೀಗ ಕೇವಲ 250 ಮೀಟರ್ ಮಾತ್ರ ಬಳಕೆಗೆ ದೊರೆಯುತ್ತದೆ.






