June 21, 2026
GT

ಅಹಮದಾಬಾದ್‌: ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತು ನಿರಾಸೆಯಲ್ಲಿದ್ದ ಗುಜರಾತ್ ಟೈಟಾನ್ಸ್ (GT) ತಂಡಕ್ಕೆ ಭಾನುವಾರ ರಾತ್ರಿ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿತ್ತು. ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ತಾಂತ್ರಿಕ ದೋಷದಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಅದೃಷ್ಟವಶಾತ್ ದೊಡ್ಡ ಅವಘಡವೊಂದು ತಪ್ಪಿದೆ.ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದ ನಂತರ, ಗುಜರಾತ್ ಟೈಟಾನ್ಸ್ ತಂಡವು ಸ್ಟೇಡಿಯಂನಿಂದ ಹೋಟೆಲ್‌ಗೆ ಮರಳುತ್ತಿತ್ತು. ಈ ವೇಳೆ ಬಸ್‌ನಲ್ಲಿ ಹಠಾತ್ ಶಾರ್ಟ್ ಸರ್ಕ್ಯೂಟ್ ಕಾಣಿಸಿಕೊಂಡು, ವಾಹನದೊಳಗೆ ದಟ್ಟವಾದ ಹೊಗೆ ತುಂಬಿಕೊಂಡಿತು. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಬಸ್ ನಿಲ್ಲಿಸಿ, ಎಲ್ಲಾ ಆಟಗಾರರು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಈ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಆಟಗಾರರು ಸುಮಾರು ಒಂದು ಗಂಟೆಗಳ ಕಾಲ ರಸ್ತೆಯಲ್ಲೇ ಕಾಯಬೇಕಾಯಿತು.ಆರ್‌ಸಿಬಿ ವಿರುದ್ಧದ ಫೈನಲ್ ಪಂದ್ಯದಲ್ಲಿ 5 ವಿಕೆಟ್‌ಗಳ ಸೋಲು ಕಂಡಿದ್ದ ಜಿಟಿ ಆಟಗಾರರಿಗೆ ಈ ಬಸ್ ಅವಘಡ ತಂಡಕ್ಕೆ ಪ್ರಯಾಣದ ಅಡಚಣೆ ಮತ್ತಷ್ಟು ಕಿರಿಕಿರಿ ಉಂಟುಮಾಡಿತು.ಕಳೆದ ಕೆಲವು ದಿನಗಳಿಂದ ಗುಜರಾತ್ ತಂಡದ ಪ್ರಯಾಣದ ವೇಳಾಪಟ್ಟಿ ಅತ್ಯಂತ ಬಿಗಿಯಾಗಿತ್ತು. ಮೇ 27 ರಂದು ಧರ್ಮಶಾಲಾದಿಂದ ಮುಲ್ಲಾನ್‌ಪುರಕ್ಕೆ ಪ್ರಯಾಣ ಬೆಳೆಸಿದ್ದ ತಂಡ, ಮೇ 29 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್ 2 ಪಂದ್ಯವನ್ನು ಆಡಿತ್ತು. ನಂತರ ಮೇ 30 ರಂದು ಅಹಮದಾಬಾದ್‌ಗೆ ಬರಬೇಕಿತ್ತಾದರೂ, ಮುಲ್ಲಾನ್‌ಪುರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ವಿಳಂಬವಾಗಿತ್ತು. ಶನಿವಾರ ತಡರಾತ್ರಿವಷ್ಟೇ ತಂಡವು ಅಹಮದಾಬಾದ್‌ಗೆ ತಲುಪಿತ್ತು.ಸತತ ಪ್ರಯಾಣ ಮತ್ತು ವಿಶ್ರಾಂತಿಯ ಕೊರತೆಯಿಂದಾಗಿ ತಂಡವು ಫೈನಲ್‌ನಲ್ಲಿ ಸೋತಿತೇ? ಎಂಬ ಪ್ರಶ್ನೆಗೆ ಗುಜರಾತ್ ಟೈಟಾನ್ಸ್‌ನ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಪ್ರತಿಕ್ರಿಯಿಸಿದ್ದಾರೆ. ನಾವು ಆಯಾಸಗೊಂಡಿದ್ದೇವೆ ಅಥವಾ ಸತತ ಪಂದ್ಯಗಳನ್ನು ಆಡಿದ್ದೇವೆ ಎಂಬ ನೆಪ ಹೇಳಿ ಆರ್‌ಸಿಬಿ ತಂಡದ ಗೆಲುವಿನ ಕ್ರೆಡಿಟ್ ಅನ್ನು ಕಸಿದುಕೊಳ್ಳಲು ನಾನು ಬಯಸುವುದಿಲ್ಲ. ನಾವು ಕೇವಲ 155/8 ರನ್‌ ಗಳಿಸಿದ್ದು ಕಡಿಮೆ ಮೊತ್ತವಾಗಿತ್ತು. ನಮ್ಮ ಬೌಲರ್‌ಗಳು ಉತ್ತಮ ಹೋರಾಟ ನೀಡಿದರು. ಕೆಲವು ವಿಷಯಗಳನ್ನು ನಾವು ವಿಭಿನ್ನವಾಗಿ ಮಾಡಬಹುದಿತ್ತು. ಎದುರಾಳಿ ತಂಡ ಚೆನ್ನಾಗಿ ಆಡಿದಾಗ ಅದನ್ನು ಒಪ್ಪಿಕೊಳ್ಳಲೇಬೇಕು ಎಂದು ಸೋಲಂಕಿ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

About The Author

Leave a Reply