June 1, 2026
snake-niya

ಆರೂರ್ (ಕೇರಳ): ಜೂನ್ 1ರ ಸೋಮವಾರದಂದು ಹೊಸ ಪುಸ್ತಕ, ಹೊಸ ಸಮವಸ್ತ್ರ ಧರಿಸಿ 8ನೇ ತರಗತಿಯನ್ನು ಆರಂಭಿಸಬೇಕಿದ್ದ ನಿಯಾ ಲೆನಿನ್ (13) ಎಂಬ ವಿದ್ಯಾರ್ಥಿನಿ, ಹಾವಿನ ಕಡಿತದ ತೀವ್ರ ವಿಷದಿಂದಾಗಿ 24 ದಿನಗಳ ಕಾಲ ಆಸ್ಪತ್ರೆಯಲ್ಲಿ ಹೋರಾಡಿ ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಆರೂರ್ ಸೇಂಟ್ ಆಗಸ್ಟೀನ್ಸ್ ಹೈಯರ್ ಸೆಕೆಂಡರಿ ಶಾಲೆಯ ಈ ವಿದ್ಯಾರ್ಥಿನಿಯ ಸಾವು ಇಡೀ ಗ್ರಾಮ ಮತ್ತು ಶಾಲಾ ಸಮುದಾಯವನ್ನು ಆಘಾತ ಹಾಗೂ ಶೋಕ ಸಾಗರದಲ್ಲಿ ಮುಳುಗಿಸಿದೆ.

ಸ್ಥಳೀಯ ದೇವಸ್ಥಾನದ ಅರ್ಚಕ ದಂಪತಿಯಾದ ಲೆನಿನ್ ಮತ್ತು ರಾಜಿ ಅವರ ಕಿರಿಯ ಮಗಳಾದ ನಿಯಾ, ಮೇ 7ರ ಸಂಜೆ ನಿವಾಸಿಗಳ ಸಂಘದ ವಾರ್ಷಿಕ ದಿನಾಚರಣೆಗಾಗಿ ಸ್ನೇಹಿತರೊಂದಿಗೆ ನೃತ್ಯ ಅಭ್ಯಾಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಸಂಜೆ 7.30ರ ಸುಮಾರಿಗೆ ಆಕೆಯ ಕಾಲಿಗೆ ತೀಕ್ಷ್ಣವಾದ ನೋವು ಕಾಣಿಸಿಕೊಂಡಿತ್ತು. ಆದರೆ, ಅದು ದೊಡ್ಡ ಕಪ್ಪು ಇರುವೆ ಕಚ್ಚಿ ಉಂಟಾದ ನೋವಿರಬಹುದು ಎಂದು ನಿಯಾ ಭಾವಿಸಿದ್ದಳು. ಪಕ್ಕದ ಮನೆಯವರು ಮತ್ತು ಸ್ನೇಹಿತರು ಹಾವು ಕಡಿತವಿರಬಹುದು ಎಂದು ಶಂಕಿಸಿ, ಪರಿಶೀಲಿಸಲು ಕುಳಿತುಕೊಳ್ಳುವಂತೆ ಕೇಳಿಕೊಂಡರೂ, ನೃತ್ಯದ ಮೇಲಿನ ಅತಿಯಾದ ಉತ್ಸಾಹದಲ್ಲಿದ್ದ ನಿಯಾ, “ಅದು ಗಂಭೀರವಾದದ್ದೇನೂ ಅಲ್ಲ, ಇರುವೆ ಅಥವಾ ಕಪ್ಪೆ ತಾಗಿರಬಹುದು” ಎಂದು ಹೇಳಿ ಕಾಲಿಗೆ ಅರಿಶಿನ ಪುಡಿ ಹಚ್ಚಿಕೊಂಡು ನಿರ್ಲಕ್ಷಿಸಿದ್ದಳು.ಅರ್ಚಕರಾಗಿದ್ದ ತಂದೆಗೆ ವೆಂಟಿಲೇಟರ್ ಹಾಗೂ ಚಿಕಿತ್ಸೆಯ ₹12 ಲಕ್ಷ ವೆಚ್ಚ ಭರಿಸುವುದು ಅಸಾಧ್ಯವಾಗಿತ್ತು. ನೆರೆಹೊರೆಯವರು, ಶಿಕ್ಷಕರು ಯುಪಿಐ ಲಿಂಕ್ ಮೂಲಕ ಹಣ ಸಂಗ್ರಹಿಸಿಕೊಟ್ಟರೆ, ತಂದೆ ತನ್ನ ಒಂಟಿ ಮನೆ ಮತ್ತು ಜಮೀನನ್ನು ಅಡಮಾನವಿಟ್ಟು ₹5 ಲಕ್ಷ ಸಾಲ ಪಡೆದಿದ್ದರು. ಮಧ್ಯೆ ವೆಂಟಿಲೇಟರ್‌ನಿಂದ ಹೊರಬಂದು ಚೇತರಿಸಿಕೊಳ್ಳುವ ಭರವಸೆ ಮೂಡಿಸಿದ್ದ ನಿಯಾ, ಶನಿವಾರ ರಾತ್ರಿ ಹಠಾತ್ತನೆ ತೀವ್ರ ಅಸ್ವಸ್ಥಗೊಂಡು ಭಾನುವಾರ ಬೆಳಿಗ್ಗೆ 7.30ಕ್ಕೆ ಕೊನೆಯುಸಿರೆಳೆದಳು. ಸೋಮವಾರ ಶಾಲೆಯಲ್ಲಿ ಆಕೆಯ ಸೀಟು ಖಾಲಿಯಾಗಿದ್ದು, ಶಿಕ್ಷಕರು ಮತ್ತು ಸಹಪಾಠಿಗಳು ಕಣ್ಣೀರಿನೊಂದಿಗೆ ಸಂತಾಪ ಸೂಚಕ ಸಭೆ ನಡೆಸಿದ್ದಾರೆ. ನೆಟ್ಟೂರಿನ ಶಾಂತಿವನಂ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

About The Author

Leave a Reply