

ಬೆಳ್ತಂಗಡಿ : 15 ವರ್ಷ ಪ್ರಾಯದ ವಿಧ್ಯಾರ್ಥಿನಿಯೊಬ್ಬಳು ಮನೆಯ ಕೊಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ (ಜೂನ್ 1) ಬೆಳಿಗ್ಗೆ ಸಂಭವಿಸಿದೆ. ಬಾಲಕಿಯ ಅಸಹಜ ಸಾವಿನಲ್ಲಿ ತೀವ್ರ ಸಂಶಯವಿರುವುದಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತ ಬಾಲಕಿಯು ಸ್ಥಳೀಯ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಸೋಮವಾರ ಬೆಳಿಗ್ಗೆ ಎಂದಿನಂತೆ ಎದ್ದಿದ್ದ ಆಕೆ, ತನ್ನ ಕೋಣೆಗೆ ತೆರಳಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾಳೆ. ಸಾಕಷ್ಟು ಸಮಯ ಕಳೆದರೂ ಬಾಲಕಿ ಕೋಣೆಯ ಬಾಗಿಲು ತೆರೆಯದಿದ್ದಾಗ, ಆಕೆಯ ತಾಯಿ ಬಾಗಿಲು ತಟ್ಟಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಆತಂಕಗೊಂಡ ತಾಯಿ, ಕೋಣೆಯ ಕಿಟಕಿಯ ಮೂಲಕ ಇಣುಕಿ ನೋಡಿದ್ದಾರೆ. ಈ ವೇಳೆ ಬಾಲಕಿ ಕೋಣೆಯ ಒಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಮಗಳ ಅಕಾಲಿಕ ನಿಧನದಿಂದ ಆಘಾತಕ್ಕೊಳಗಾದ ತಂದೆ, ತನ್ನ ಮಗಳ ಸಾವಿನ ಹಿಂದೆ ಸಂಶಯವಿದೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಪೋಷಕರ ದೂರಿನನ್ವಯ ಬೆಳ್ತಂಗಡಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.






