

ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಸಂಸ್ಥೆಯಿಂದ ಸಾವಿರಾರು ಕೋಟಿ ಅಕ್ರಮ ಸಂಬಂಧ ತನಿಖೆ ನಡೆಯುತ್ತಿರುವ ನಡುವೆಯೇ ಬೆಳಗಾವಿಯಲ್ಲಿ ಮತ್ತೊಂದು ನೂರಾರು ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಭಾಗ್ಯ ನಗರದಲ್ಲಿರುವ ಆದಿತ್ಯರಾಜ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೆ ಎಸಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ರೇಡ್ ಕುರಿತು ಮಾಹಿತಿ ಸಿಗುತ್ತಿದ್ದಂತೆ ಆನ್ ಲೈನ್ ಮೂಲಕ ವ್ಯವಹಾರ ನಡೆಸುತ್ತಿದ್ದ ಕಂಪನಿಯ ವೆಬ್ಸೈಟ್ ಸ್ಥಗಿತವಾಗಿದೆ. ಹೀಗಾಗಿ ಕಂಪನಿ ಮಾಲಿಕ ಅಧಿಕಾರಿಗಳಿಗೇ ಚಳ್ಳೆಹಣ್ಣು ತಿನ್ನಿಸಲು ಮುಂದಾದರಾ ಎಂಬ ಅನುಮಾನವೂ ವ್ಯಕ್ತವಾಗಿದೆ.ಆದಿತ್ಯರಾಜ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಮಹಾರಾಷ್ಟ್ರ ಮೂಲದ ಬಲರಾಮ್ ಮಾನೆ ಎಂಬಾತ ನಡೆಸುತ್ತಿದ್ದು, ಒಟ್ಟು 7 ಶಾಖೆಗಳನ್ನು ಇದು ಹೊಂದಿದೆ ಎನ್ನಲಾಗಿದೆ. ಕಳೆದ 8 ವರ್ಷಗಳಿಂದ ಬೆಳಗಾವಿಯಲ್ಲಿ ಕಂಪನಿ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಗಳ ದಾಳಿಗೂ ಮುನ್ನ ಮೆಂಟೆನನ್ಸ್ ನೆಪ ಹೇಳಿ ಸರ್ವರ್ ಡೌನ್ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್ ನೇತೃತ್ವದಲ್ಲಿ ದಾಳಿ ವೇಳೆ ನೂರಾರು ಕೋಟಿ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದ್ದು, ಆನ್ ಲೈನ್ ಮೂಲಕ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ. ಒಂದು ಲಕ್ಷಕ್ಕೆ ತಿಂಗಳಿಗೆ 3ಸಾವಿರ ಹಣ ಬಡ್ಡಿ ಕೊಡುವುದಾಗಿ ಆಮಿಷವೊಡ್ಡಿ ಸಾವಿರಾರು ಜನರಿಂದ ಹಣ ಠೇವಣಿ ಇರಿಸಿಕೊಂಡು ವಂಚನೆ ಆರೋಪ ಕೇಳಿಬಂದಿದೆ. ಹೀಗಾಗಿ ದಾಖಲೆ ಸೇರಿದಂತೆ ಹಣದ ಮೂಲದ ಪರಿಶೀಲನೆಗೆ ಅಧಿಕಾರಿಗಳು ಮುಂದಾಗಿದ್ದಾರೆ.






