June 4, 2026
uttarakhand

ಉತ್ತರಾಖಂಡ್ : ಪ್ರಪಾತಕ್ಕೆ ಬೀಳುತ್ತಿದ್ದ ಬಸ್ಸನ್ನು ಅತ್ಯಂತ ಸಮಯಪ್ರಜ್ಞೆಯಿಂದ ಬೆಟ್ಟದ ಕಡೆಗೆ ತಿರುಗಿಸಿ 34 ಪ್ರಯಾಣಿಕರ ಪ್ರಾಣ ಉಳಿಸಿದ ಉತ್ತರಾಖಂಡ ಸಾರಿಗೆ ನಿಗಮದ ಚಾಲಕನೊಬ್ಬ, ಈ ರಕ್ಷಣಾ ಹೋರಾಟದ ನಡುವೆ ತಾವೇ ಬಸ್‌ನಿಂದ ಕೆಳಗೆ ಬಿದ್ದು ಚಕ್ರದಡಿ ಸಿಲುಕಿ ಮರಣವನ್ನಪ್ಪಿದ ದಾರುಣ ಘಟನೆ ಚಂಪಾವತ್‌ನ ಲೋಹಘಾಟ್ ಪ್ರದೇಶದಲ್ಲಿ ನಡೆದಿದೆ.ಜೂನ್ 3 ರ ಬುಧವಾರ ಬೆಳಿಗ್ಗೆ ಉತ್ತರಾಖಂಡ ಸಾರಿಗೆ ನಿಗಮದ ಬಸ್ ಧಾರ್ಚುಲಾದಿಂದ ತನಕ್‌ಪುರಕ್ಕೆ ಹೊರಟಿತ್ತು. ಬಸ್‌ನಲ್ಲಿ ಚಾಲಕ ಸೇರಿ ಒಟ್ಟು 35 ಜನರಿದ್ದರು. ರಾಯ್‌ಕೋಟ್ ಮಹೇರ್‌ನ ಕೈಲ್ ಬಕ್ರಿಯನ್ ದೇವಸ್ಥಾನದ ಬಳಿಯ ಅಪಾಯಕಾರಿ ತಿರುವಿನಲ್ಲಿ ಬರುತ್ತಿದ್ದಂತೆ ಬಸ್‌ನಲ್ಲಿ ಇದ್ದಕ್ಕಿದ್ದಂತೆ ತಾಂತ್ರಿಕ ದೋಷ (ಬ್ರೇಕ್ ಅಥವಾ ಸ್ಟೀರಿಂಗ್ ವೈಫಲ್ಯ) ಕಾಣಿಸಿಕೊಂಡಿದೆ. ಬಸ್ ನಿಯಂತ್ರಣ ತಪ್ಪಿ ಪಕ್ಕದಲ್ಲೇ ಇದ್ದ ಆಳವಾದ ಕಂದಕಕ್ಕೆ ಬೀಳುವ ಸಾಧ್ಯತೆ ಇತ್ತು, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಬೆನಿರಾಮ್ ಥ್ವಾಲ್ ಅತ್ಯಂತ ತ್ವರಿತವಾಗಿ ಕಾರ್ಯನಿರ್ವಹಿಸಿದರು. ಬಸ್ ಪ್ರಪಾತಕ್ಕೆ ಬಿದ್ದರೆ ಎಲ್ಲರೂ ಜೀವ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಹೀಗಾಗಿ, ಪ್ರಯಾಣಿಕರನ್ನು ರಕ್ಷಿಸಲು ಅವರು ತಕ್ಷಣ ಬಸ್ಸನ್ನು ಕಂದಕದ ವಿರುದ್ಧ ದಿಕ್ಕಿನಲ್ಲಿದ್ದ ಬೆಟ್ಟದ ಕಡೆಗೆ ಜೋರಾಗಿ ತಿರುಗಿಸಿದರು. ಚಾಲಕನ ಈ ಧೈರ್ಯದ ನಿರ್ಧಾರದಿಂದಾಗಿ ಬಸ್ ಕಂದಕಕ್ಕೆ ಬೀಳುವುದು ತಪ್ಪಿತು.ಬಸ್ಸನ್ನು ನಿಯಂತ್ರಿಸಲು ಚಾಲಕ ಬೆನಿರಾಮ್ ಅವರು ತೀವ್ರವಾಗಿ ಪ್ರಯತ್ನಿಸುತ್ತಿದ್ದಾಗ, ಅವರ ಸೀಟಿನ ಪಕ್ಕದ ಬಾಗಿಲು ಇದ್ದಕ್ಕಿದ್ದಂತೆ ತೆರೆದುಕೊಂಡಿದೆ. ಪರಿಣಾಮವಾಗಿ ಅವರು ಸೀಟಿನಿಂದ ಹೊರಕ್ಕೆ ಬಿದ್ದಿದ್ದಾರೆ. ದುರದೃಷ್ಟವಶಾತ್ ಚಲಿಸುತ್ತಿದ್ದ ಬಸ್ಸಿನ ಚಕ್ರ ಅವರ ಮೇಲೆಯೇ ಹರಿದಿದ್ದರಿಂದ ಬೆನಿರಾಮ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು. ಬಸ್ಸಿನಲ್ಲಿದ್ದ 34 ಪ್ರಯಾಣಿಕರ ಪೈಕಿ ಕೇವಲ ಒಬ್ಬ ಮಹಿಳೆಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದೆಲ್ಲಾ ಪ್ರಯಾಣಿಕರು ಪವಾಡಸದೃಶವಾಗಿ ಪಾರಾಗಿದ್ದಾರೆ.ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಪೊಲೀಸ್, ಆಡಳಿತ ಹಾಗೂ ರಸ್ತೆ ಇಲಾಖೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಬಸ್ಸನ್ನು ಪಕ್ಕಕ್ಕೆ ಸರಿಸಿ, ಚಾಲಕನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಉತ್ತರಾಖಂಡ ಸಾರಿಗೆ ನಿಗಮದ ಎಜಿಎಂ ಧೀರಜ್ ವರ್ಮಾ ಮಾತನಾಡಿ, “ಬಸ್ಸಿನಲ್ಲಿದ್ದ ಎಲ್ಲಾ 34 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ, ಮತ್ತೊಂದು ಬಸ್ ಮೂಲಕ ಅವರ ಗಮ್ಯಸ್ಥಾನಕ್ಕೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಬ್ರೇಕ್ ಅಥವಾ ಸ್ಟೀರಿಂಗ್ ವೈಫಲ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ” ಎಂದಿದ್ದಾರೆ. ತನ್ನ ಪ್ರಾಣವನ್ನೇ ನೀಡಿ 34 ಕುಟುಂಬಗಳಿಗೆ ಆಸರೆಯಾದ ಚಾಲಕನ ಧೀರತನಕ್ಕೆ ಇಡೀ ರಾಜ್ಯವೇ ಕಣ್ಣೀರಿನ ನಮನ ಸಲ್ಲಿಸುತ್ತಿದೆ.

About The Author

Leave a Reply