June 10, 2026
10-06-26-TA-namaz

ಹೊನ್ನಾವರ: ಮಸೀದಿಯಲ್ಲಿ ಅಸರ್ ನಮಾಜ್‌ಗಾಗಿ ಅಝಾನ್ ಮೊಳಗಿಸುತ್ತಿದ್ದ ವೇಳೆ ಮೌಲ್ವಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದ ಎಂ.ಜೆ.ಎಂ ಮಸೀದಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.ಮೃತರನ್ನು ಮಂಗಳೂರು ಮೂಲದ ಕುಕ್ಕಾಜೆಯ ಅಬ್ದುಲ್ ಲತೀಫ್ ಮದನಿ ಎಂದು ಗುರುತಿಸಲಾಗಿದೆ. ಮಕ್ಕಳಿಗೆ ಇಸ್ಲಾಮಿಕ್ ಧಾರ್ಮಿಕ ಹಾಗೂ ಮದರಸಾ ಶಿಕ್ಷಣ ನೀಡುವ ಉದ್ದೇಶದಿಂದ ಅವರು ಸುಮಾರು ಆರು ತಿಂಗಳ ಹಿಂದೆ ಹೊನ್ನಾವರಕ್ಕೆ ಆಗಮಿಸಿ ಮಸೀದಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಮಂಗಳವಾರ ಸಂಜೆ ವಾಡಿಕೆಯಂತೆ ಅಸರ್ ನಮಾಜ್‌ಗೆ ಮುನ್ನ ಮೈಕ್ ಮೂಲಕ ಅಝಾನ್ ಮೊಳಗಿಸುತ್ತಿದ್ದ ವೇಳೆ ಅವರಿಗೆ ಏಕಾಏಕಿ ತೀವ್ರ ಹೃದಯಾಘಾತ ಸಂಭವಿಸಿದೆ. ಅಝಾನ್ ಹೇಳುತ್ತಿದ್ದಾಗಲೇ ಅವರು ಕುಸಿದು ಬಿದ್ದಿದ್ಧಾರೆ ಎನ್ನಲಾಗಿದೆ.ತಕ್ಷಣವೇ ಮಸೀದಿಯಲ್ಲಿದ್ದವರು ಅವರನ್ನು ಹೊನ್ನಾವರದ ಸೆಂಟ್ ಇಗ್ನೇಶಿಯಸ್ ಆಸ್ಪತ್ರೆಗೆ ಕರೆದೊಯ್ದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.ಮೌಲ್ವಿ ಅಬ್ದುಲ್ ಲತೀಫ್ ಅವರ ಕೊನೆಯ ಕ್ಷಣಗಳು ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳು ನೋಡುಗರ ಮನಕಲಕುವಂತಿವೆ. ಅಲ್ಲಾಹನ ನಾಮಸ್ಮರಣೆ ಮಾಡುತ್ತಾ, ಪವಿತ್ರ ಪ್ರಾರ್ಥನೆಯ ಕರೆಯನ್ನು ನೀಡುತ್ತಿದ್ದ ಕ್ಷಣದಲ್ಲೇ ಅವರು ಇಹಲೋಕ ತ್ಯಜಿಸಿರುವುದು ಸ್ಥಳೀಯರಲ್ಲಿ ದುಃಖ ಮೂಡಿಸಿದ್ದು, ಅನೇಕರು ಇದನ್ನು ಪುಣ್ಯದ ಸಾವು ಎಂದು ಭಾವಿಸಿ ಕಂಬನಿ ಮಿಡಿದಿದ್ದಾರೆ.

About The Author

Leave a Reply