June 11, 2026
mani-accident-1

ವಿಟ್ಲ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಬುಧವಾರ ಮಧ್ಯಾಹ್ನ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ (ಡಿವೈಡರ್) ಢಿಕ್ಕಿ ಹೊಡೆದು ಪಲ್ಟಿಯಾದ ಭೀಕರ ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಚಾಲಕ ಜಾಗದಲ್ಲೇ ಮೃತಪಟ್ಟಿದ್ದು, ಮೂವರು ಸಹಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.ಹಾಸನ ಮೂಲದ ಲಕ್ಷ್ಮೀಕಾಂತ್ ಮೃತಪಟ್ಟ ದುರ್ದೈವಿ ಚಾಲಕ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಸಹಪ್ರಯಾಣಿಕರಾದ ರಂಜಿತ್, ದರ್ಶನ್ ಮತ್ತು ಶೋಭಾ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸನ ಮೂಲದ ಈ ನಾಲ್ವರು ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಕಾರಿನಲ್ಲಿ ಮಂಗಳೂರು ಕಡೆಗೆ ಸಂಚರಿಸುತ್ತಿದ್ದರು. ಕಾರು ಗಡಿಯಾರ ಸಮೀಪದ ತಿರುವಿನಲ್ಲಿ ತಲುಪುತ್ತಿದ್ದಂತೆ ಒಮ್ಮೆಲೇ ಚಾಲಕ ಲಕ್ಷ್ಮೀಕಾಂತ್ ಅವರ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಭೀಕರವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಹೆದ್ದಾರಿಯಲ್ಲೇ ಹಲವು ಪಲ್ಟಿ ಹೊಡೆದಿದ್ದು, ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.ಗಡಿಯಾರದ ಸ್ಥಳೀಯ ನಿವಾಸಿಗಳು ಕೂಡಲೇ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ನುಜ್ಜುಗುಜ್ಜಾಗಿದ್ದ ಕಾರಿನ ಕಬ್ಬಿಣದ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದ ನಾಲ್ವರನ್ನು ಹರಸಾಹಸಪಟ್ಟು ಹೊರಗೆ ತೆಗೆದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಾಲಕ ಲಕ್ಷ್ಮೀಕಾಂತ್ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ತಕ್ಷಣವೇ ಪೊಲೀಸರು ಕ್ರೇನ್ ತರಿಸಿ ಜಖಂಗೊಂಡ ಕಾರನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

About The Author

Leave a Reply