

ಬ್ರಹ್ಮಾವರ : ಹೆತ್ತ ತಾಯಿ ತನ್ನ ಹಿರಿಯ ಮಗಳನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ಸಂದರ್ಭದಲ್ಲಿ, ಕಂಕುಳಲ್ಲಿದ್ದ ಒಂದೂವರೆ ವರ್ಷದ ಗಂಡು ಮಗುವಿನ ತಲೆಗೆ ಅಚಾನಕ್ಕಾಗಿ ತೆಂಗಿನಕಾಯಿ ಬಿದ್ದು ಮಗು ಮೃತಪಟ್ಟಿರುವ ಅತ್ಯಂತ ಕರುಣಾಜನಕ ಹಾಗೂ ಆಘಾತಕಾರಿ ಘಟನೆ ಹೆರಂಜೆಯಲ್ಲಿ ಮಂಗಳವಾರ ಸಂಭವಿಸಿದೆ. ಬ್ರಹ್ಮಾವರದಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿರುವ ಪ್ರಶಾಂತ್ ಹಾಗೂ ಗೃಹಿಣಿ ಸುಚಿತ್ರಾ ದಂಪತಿಯ ಒಂದೂವರೆ ವರ್ಷದ ಪುತ್ರನೇ ಮೃತಪಟ್ಟ ದುರ್ದೈವಿ.ಸಾಮಾನ್ಯವಾಗಿ ತಾಯಿ ಸುಚಿತ್ರಾ ಅವರು ತನ್ನ 6 ವರ್ಷದ ಹಿರಿಯ ಮಗಳನ್ನು ಶಾಲಾ ಬಸ್ ಹತ್ತಿಸಲು ಹೋಗುವಾಗ ಈ ಪುಟ್ಟ ಮಗುವನ್ನು ಕರೆದೊಯ್ಯುತ್ತಿರಲಿಲ್ಲ. ವಿಶೇಷವಾಗಿ ಮಳೆ ಬರುವಾಗ ಕೊಡೆ ಹಿಡಿಯಬೇಕಾದ ಕಾರಣ ಮಗುವನ್ನು ಮನೆಯಲ್ಲೇ ಬಿಡುತ್ತಿದ್ದರು. ಆದರೆ ಮಂಗಳವಾರ ಮಗಳ ಶಾಲಾ ಬಸ್ ಬರುವ ಸಮಯಕ್ಕೆ ಮಳೆ ನಿಂತಿದ್ದರಿಂದ, ಸುಚಿತ್ರಾ ಅವರು ಪುಟ್ಟ ಮಗುವನ್ನೂ ಕಂಕುಳಲ್ಲಿ ಎತ್ತಿಕೊಂಡು ಹೊರಟಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು.ದಂಪತಿಯ ಮನೆಗೆ ನೇರ ರಸ್ತೆ ಸಂಪರ್ಕವಿಲ್ಲದ ಕಾರಣ, ಶಾಲಾ ಬಸ್ ಬರುವ ಜಾಗಕ್ಕೆ ತಲುಪಲು ತೋಟ ಹಾಗೂ ಗದ್ದೆಯ ಬದಿಯಲ್ಲಿ ಸುಮಾರು 250 ರಿಂದ 300 ಮೀಟರ್ ನಡೆಯಬೇಕಾಗಿತ್ತು. ಮನೆ ದಾಟಿ ತೋಟದ ಹಾದಿಯಲ್ಲಿ ಕೇವಲ 50 ಮೀಟರ್ ಸಾಗುವಷ್ಟರಲ್ಲಿ, ದಾರಿ ಬದಿಯಲ್ಲಿದ್ದ 40 ಅಡಿ ಎತ್ತರದ ಮರದಿಂದ ಹಸಿ ತೆಂಗಿನಕಾಯಿಯೊಂದು ಅಚಾನಕ್ಕಾಗಿ ನೇರವಾಗಿ ತಾಯಿಯ ಕಂಕುಳಲ್ಲಿದ್ದ ಮಗುವಿನ ತಲೆಗೆ ಬಿದ್ದಿದೆ. ಕಾಯಿ ಬಿದ್ದ ರಭಸಕ್ಕೆ ಮಗುವಿನ ತಲೆಯಲ್ಲಿ ಒಂದು ಇಂಚಿನಷ್ಟು ಆಳವಾದ ಗಾಯವಾಗಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ.ದುರಂತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಪಕ್ಕದ ಮನೆಯ ವಾಹನದಲ್ಲಿ ಮಗುವನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆ ತಲುಪುವವರೆಗೂ ಮಗು ಕಣ್ಣು ಬಿಟ್ಟು ನೋಡುತ್ತಿತ್ತು ಎನ್ನಲಾಗಿದೆ. ಮಣಿಪಾಲ ಆಸ್ಪತ್ರೆಯ ವೈದ್ಯರು ತಕ್ಷಣವೇ ಮಗುವಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿದರಾದರೂ, ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ಮಗು ಕೊನೆಯುಸಿರೆಳೆದಿದೆ. ಅಪರೂಪದಲ್ಲೂ ಅಪರೂಪದ ಈ ವಿಧಿಯ ಕ್ರೂರ ಆಟಕ್ಕೆ ಹೆರಂಜೆ ಗ್ರಾಮಸ್ಥರು ತೀವ್ರ ಕಂಬನಿ ಮಿಡಿದಿದ್ದಾರೆ.






