June 14, 2026
patna-1

ಪಾಟ್ನಾ : ಹಣದ ಆಸೆಗೆ ಬಿದ್ದ ಇಬ್ಬರು ಅಪ್ರಾಪ್ತ ಶಾಲಾ ಬಾಲಕಿಯರು ಸಿನಿಮೀಯ ಶೈಲಿಯಲ್ಲಿ ಆಭರಣ ಅಂಗಡಿಯನ್ನು ದರೋಡೆ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿರುವ ಆಘಾತಕಾರಿ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ದಿಘಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರ್ಜಿಯ ‘ಮಾ ವೈಷ್ಣೋ ಜ್ಯುವೆಲ್ಲರ್ಸ್’ ಎಂಬ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಶುಕ್ರವಾರ ಸಂಜೆ ಸುಮಾರು 5:30 ರ ಸುಮಾರಿಗೆ ಇಬ್ಬರು ಹುಡುಗಿಯರು ಮುಖವಾಡ ಧರಿಸಿ ಗ್ರಾಹಕರಂತೆ ಅಂಗಡಿಯನ್ನು ಪ್ರವೇಶಿಸಿದ್ದಾರೆ. ಅಂಗಡಿ ಮಾಲೀಕ ರಾಜೇಶ್ ಕುಮಾರ್ ಅವರಿಗೆ ಕಿವಿಯೋಲೆಗಳನ್ನು ತೋರಿಸುವಂತೆ ಕೇಳಿದ್ದಾರೆ. ರಾಜೇಶ್ ಅವರು ಆಭರಣಗಳನ್ನು ತೋರಿಸಲು ಮುಂದಾದಾಗ, ಒಬ್ಬ ಹುಡುಗಿ ಇದ್ದಕ್ಕಿದ್ದಂತೆ ಅವರ ಮುಖಕ್ಕೆ ಸ್ಪ್ರೇ ಬಾಟಲಿಯಿಂದ ದ್ರವವನ್ನು ಸಿಂಪಡಿಸಿದ್ದಾಳೆ. ಆದರೆ ಸಮಯಪ್ರಜ್ಞೆ ಮೆರೆದ ರಾಜೇಶ್ ತಕ್ಷಣವೇ ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಓಡಿ ಬಂದು ಕೂಗಾಡಿದ್ದಾರೆ.ರಾಜೇಶ್ ಅವರ ಕಿರುಚಾಟ ಕೇಳಿ ಸ್ಥಳೀಯರು ಜಮಾಯಿಸಿದ್ದಾರೆ. ಈ ವೇಳೆ ಒಬ್ಬ ಹುಡುಗಿ ಪರಾರಿಯಾಗುವಲ್ಲಿ ಯಶಸ್ವಿಯಾದರೆ, ಮತ್ತೊಬ್ಬಳನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ತಪ್ಪಿಸಿಕೊಂಡಿದ್ದ ಇನ್ನೊಬ್ಬಳು ಕೂಡ ಸಿಕ್ಕಿಬಿದ್ದಿದ್ದಾಳೆ.ವಿಚಾರಣೆ ವೇಳೆ ಇಬ್ಬರೂ ಹುಡುಗಿಯರು ಅಪ್ರಾಪ್ತ ವಯಸ್ಕರು ಎಂದು ತಿಳಿದುಬಂದಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕಾರಣ ಶಾರ್ಟ್‌ಕಟ್ ಮೂಲಕ ಹಣ ಗಳಿಸಲು ಈ ಯೋಜನೆಯನ್ನು ರೂಪಿಸಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ. ಇಬ್ಬರನ್ನೂ ಸದ್ಯ ರಿಮಾಂಡ್ ಹೋಂಗೆ ಕಳುಹಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಇದರಲ್ಲಿ ಯಾವುದೇ ದೊಡ್ಡ ಗ್ಯಾಂಗ್ ಭಾಗಿಯಾಗಿಲ್ಲ. ಆದರೆ ಒಬ್ಬ ಹುಡುಗಿಯ ತಂದೆಗೆ ಕ್ರಿಮಿನಲ್ ಹಿನ್ನೆಲೆ ಇರುವುದರಿಂದ, ಈ ಕೃತ್ಯದ ಹಿಂದೆ ಅವರ ಪ್ರೇರಣೆ ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Leave a Reply