

ಬಂಟ್ವಾಳ ಮಂಚಿ: SKSM ಅಧೀನ ಸಂಸ್ಥೆಯಾದ ದಾರುಲ್ ಖೈರ್ ಎಜುಕೇಶನಲ್ ಅಕಾಡೆಮಿಯ ಹಿಫ್ಝ್ ಕಾಲೇಜು ಹಾಗೂ ಕಿಂಡರ್ ಗಾರ್ಟನ್ (ಕೆ.ಜಿ.) ವಿಭಾಗದ ಉದ್ಘಾಟನಾ ಸಮಾರಂಭವು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕಾಡಂಗಡಿಯಲ್ಲಿ ಅರ್ಥಪೂರ್ಣವಾಗಿ ನೆರವೇರಿತು. ಪವಿತ್ರ ಕುರ್‌ಆನ್ ಶಿಕ್ಷಣದೊಂದಿಗೆ ಗುಣಮಟ್ಟದ ಲೌಕಿಕ ವಿದ್ಯೆಯನ್ನು ಸಮನ್ವಯಗೊಳಿಸಿ, ಧಾರ್ಮಿಕ ಮೌಲ್ಯಗಳು ಹಾಗೂ ನೈತಿಕತೆಯ ಬೆಳಕಿನಲ್ಲಿ ಸಮಾಜಕ್ಕೆ ಆದರ್ಶ ಪ್ರಜೆಗಳನ್ನು ರೂಪಿಸುವ ಮಹತ್ತರ ಉದ್ದೇಶದೊಂದಿಗೆ ಶಿಕ್ಷಣ ಸಂಸ್ಥೆಯು ತನ್ನ ಪಯಣ ಆರಂಭಿಸಿದೆ.

ಗುಣಮಟ್ಟದ ಶಿಕ್ಷಣದ ಭದ್ರ ಬುನಾದಿ;ಅಬ್ದುಲ್ ರಹಿಮಾನ್ ಮಠ ಉಪ್ಪಿನಂಗಡಿ
ಕರಾವಳಿ ಭಾಗದಲ್ಲಿ ಕೇರಳ ಮಾದರಿಯ ಧಾರ್ಮಿಕ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದ್ದ ಪರಿಣಾಮ, ಉನ್ನತ ಧಾರ್ಮಿಕ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಕೇರಳವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇತ್ತು. ಈ ಹಿನ್ನೆಲೆ, ವಸತಿ ವ್ಯವಸ್ಥೆಯೊಂದಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಈ ಸಂಸ್ಥೆಯನ್ನು ಆರಂಭಿಸಲಾಗಿದೆ. ಸೂಕ್ತ ಸ್ಥಳದ ಹುಡುಕಾಟದಿಂದ ಆರಂಭಗೊಂಡು ದಾನಿಗಳ ಸಂಪರ್ಕ, ಕಟ್ಟಡ ನಿರ್ಮಾಣ ಸೇರಿದಂತೆ 15 ಟ್ರಸ್ಟಿಗಳ ನಿರಂತರ ಶ್ರಮ ಮತ್ತು ಸಂಚಾಲಕರಾದ ಅಬ್ದುಲ್ ಸತ್ತಾರ್ ಆಸ್ಕೊ ಅವರ ವಿಶೇಷ ಪ್ರಯತ್ನದಿಂದ ಈ ಕನಸು ಸಾಕಾರಗೊಂಡಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮಠ್ ಉಪ್ಪಿನಂಗಡಿ ಪ್ರಾಸ್ತಾವಿಕವಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಈ ಸಂಸ್ಥೆಯು ವಿಶ್ವವಿದ್ಯಾಲಯವಾಗಿ ಬೆಳೆದು ನಾಡಿಗೆ ಮಾದರಿಯಾಗಲಿ ಎಂದು ಆಶಿಸಿದರು.
ಕಲಿಕೆಯೇ ಸಮಾಜ ಪರಿವರ್ತನೆಯ ಶಕ್ತಿ; ಬಶೀರ್ ಶಾಲಿಮಾರ್
ಮನುಷ್ಯನ ಪರಿವರ್ತನೆ ವಿದ್ಯೆಯಿಂದ ಮಾತ್ರ ಸಾಧ್ಯ. ಪವಿತ್ರ ಕುರ್‌ಆನ್‌ನ ಮೊದಲ ಅವತೀರ್ಣಗೊಂಡ ಸಂದೇಶವೇ ‘ಓದಿ, ಕಲಿಯಿರಿ’ ಎಂಬುದಾಗಿತ್ತು. ಜ್ಞಾನವನ್ನು ಸಂಪಾದಿಸಿದ ಮನುಷ್ಯನು ಅಸಾಧ್ಯವನ್ನೂ ಸಾಧ್ಯವಾಗಿಸಬಲ್ಲನೆಂಬುದನ್ನು ಆಧುನಿಕ ಜಗತ್ತು ಸಾಕ್ಷೀಕರಿಸಿದೆ. ಶಿಕ್ಷಣವು ಕೇವಲ ವೈಯಕ್ತಿಕ ಪ್ರಗತಿಗಷ್ಟೇ ಸೀಮಿತವಾಗದೆ ಸಮಾಜದ ಒಳಿತಿಗೆ ಪೂರಕವಾಗಬೇಕು ಎಂದು ಸ್ಥಳದಾನಿ ಹಾಗೂ SKSM ಅಧ್ಯಕ್ಷ ಬಶೀರ್ ಅಹ್ಮದ್ ಶಾಲಿಮಾರ್ ಹೇಳಿದರು.
ಮಾದಕ ವ್ಯಸನದ ವಿರುದ್ಧ ಶಿಕ್ಷಣವೇ ಅಸ್ತ್ರ: ನೌಪಲ್ ಕೊಕ್ಕಡ
ಸಂಸ್ಥೆಯ ಸ್ಥಾಪನೆಯ ಹಾದಿ ಹಲವು ಸವಾಲುಗಳು, ತ್ಯಾಗಗಳು ಮತ್ತು ನಿರಂತರ ಪರಿಶ್ರಮಗಳಿಂದ ಕೂಡಿತ್ತು. ದಶಕಗಳ ಕನಸಾಗಿದ್ದ ಈ ಬೃಹತ್ ಶಿಕ್ಷಣ ಕೇಂದ್ರ ಇಂದು ಸಾಕಾರಗೊಂಡಿದೆ. ಪ್ರಸ್ತುತ ಸಮಾಜವನ್ನು ಕಾಡುತ್ತಿರುವ ಮಾದಕ ವ್ಯಸನ ಎಂಬ ಮಹಾಪಿಡುಗು ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳನ್ನೂ ಆವರಿಸುತ್ತಿದೆ. ಇಂತಹ ಪಿಡುಗುಗಳನ್ನು ತೊಲಗಿಸಲು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಸಮನ್ವಯ ಅತ್ಯಗತ್ಯವಾಗಿದ್ದು, ಈ ರೀತಿಯ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಉತ್ತಮ ದಿಕ್ಕು ತೋರಬಲ್ಲವು ಎಂದು SKSM ಯುವ ಘಟಕದ ಅಧ್ಯಕ್ಷ ಜನಾಬ್ ಮೌಲವಿ ನೌಫಲ್ ಕೊಕ್ಕಡ ಅಭಿಪ್ರಾಯಪಟ್ಟರು.
ಸಮಾಜ ನಿರ್ಮಾಣಕ್ಕೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಗತ್ಯ
ಶಿಕ್ಷಣ ಸಂಸ್ಥೆಗಳು ಕೇವಲ ಪಾಠ ಕಲಿಸುವ ಕೇಂದ್ರಗಳಾಗಿರದೆ, ಮೌಲ್ಯಯುತ ಸಮಾಜ ನಿರ್ಮಾಣದ ಅಡಿಪಾಯಗಳಾಗಬೇಕು. ಧರ್ಮ, ನೈತಿಕತೆ, ಶಿಸ್ತು ಮತ್ತು ಜ್ಞಾನದ ಸಮನ್ವಯದ ಮೂಲಕ ಉತ್ತಮ ಪೀಳಿಗೆಯನ್ನು ರೂಪಿಸುವಲ್ಲಿ ಇಂತಹ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ದಾರುಲ್ ಖೈರ್ ಎಜುಕೇಶನಲ್ ಅಕಾಡೆಮಿಯ ಅಧ್ಯಕ್ಷ ಅಬ್ದುಲ್ ಸತ್ತಾರ್ ಆಸ್ಕೊ, ಉಪಾಧ್ಯಕ್ಷ ಇಶಾಕ್ ಹಾಜಿ, ಸಂಚಾಲಕ ಮಹಮ್ಮದ್ ಅಶ್ರಫ್ ಮಾಸ್, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಉಪ್ಪಿನಂಗಡಿ, SKSM ಯುವ ಘಟಕದ ಉಪಾಧ್ಯಕ್ಷ ಸುಲೈಮಾನ್ ಫುರ್ಕಾನಿ, ಕಾರ್ಯದರ್ಶಿ ಮುಹಮ್ಮದ್ ಶಿಹಾಬ್, ಮಂಚಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಇಬ್ರಾಹಿಂ ಜಿ., ಸೆಕ್ಯುಲರ್ ವಿಭಾಗದ ಪ್ರಾಂಶುಪಾಲ ಅಬ್ದುಲ್ ರಹಿಮಾನ್ ತುಂಬೆ, ಹಸನಬ್ಬ ನಂದಾವರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೈನಾರ್ ತಾಳತ್ತನೂಜಿ, ಎಂ.ಜಿ. ರಹೀಂ, ಅಬ್ದುಲ್ ರಝಾಕ್ ಉಪ್ಪಿನಂಗಡಿ, ಫಿರೋಜ್ ಯು.ಎನ್., ಅಹ್ಮದ್ ಬಾವ ಕಣ್ಣೂರು,ಬೊಳಂತೂರು ಘಟಕದ ಅದ್ಯಕ್ಷರಾದ ಇಬ್ರಾಹಿಂ ಬೊಳಂತೂರು, Sksm ಕೇಂದ್ರ ಸಮಿತಿಯ ಉಪಾಧ್ಯಕ್ಷ ರಾದ ಅಹಮ್ಮದ್ ತಲಪಾಡಿ, ಕಾರ್ಯ ದರ್ಶಿಗಳಾದ BS ಇಂತಿಯಾಝ್, ಶೋಷಲ್ ಸರ್ವಿಸ್ ವಿಂಗ್ ನ ಲತೀಪ್ ಕುದ್ರೋಳಿ, ಕೇಂದ್ರ ಪಧಾದಿಕಾರಿಗಳಾದ ಶಂಶುದ್ದೀನ್,ಕಾಪು ಇಸ್ಮಾಯಿಲ್,ಮತ್ತು ಮುಹಮ್ಮದ್ ಕೆಂಪಿ,ಬಾವ ಕೋಣಾಜೆ, ತಾಳಿತ್ತನೂಜಿ-ಬಾರೆಬೆಟ್ಟು ಘಟಕದ ಅದ್ಯಕ್ಷರಾದ ಅಬ್ದುಲ್ ರಹೀಂ ಕುಲ್ಯಾರ್ ಉಪಸ್ಥಿತಿ ರಿದ್ದರುಹಾಗೂ ಉಲೇಮಾ-ಉಮರಾಗಳು ಉಪಸ್ಥಿತರಿದ್ದರು. ನಂತರ ಹಲವಾರು ಗಣ್ಯರು ನೂತನ ಶಿಕ್ಷಣ ಸಂಸ್ಥೆಗೆ ಶುಭ ಹಾರೈಸಿದರು.ಮೌಲವಿ ಹಬೀಬ್ ರಹ್ಮಾನ್ ಸ್ವಾಗತಿಸಿ ವಂದಿಸಿದರು,SKSM ಯೂತ್ ವಿಂಗಿನ ಶಿಯಾಬ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.






