June 16, 2026
IMG-20260616-WA0014

ಬಂಟ್ವಾಳ: ಮಳೆಗಾಲ ಆರಂಭವಾಗುತ್ತಿದ್ದಂತೆ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಭಟ್ಟಾಜೆಯ ತಾರಬಳಿ ಸಂಪರ್ಕ ಸೇತುವೆ ಕುಸಿದ ಪರಿಣಾಮ ಹಲವು ಗ್ರಾಮಗಳ ಸಂಪರ್ಕ ಕಡಿದು, ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕಿರಲೆ, ಭಟ್ಟಾಜೆ, ಸೊರ್ನಾಡು, ಎರ್ಮಲಪದವು, ಕುರಿಯಾಳ, ಬಾಳಿಕೆ, ಬಂಡಸಾಲೆ ಹಾಗೂ ಕೊಳತ್ತಮಜಲು, ಬಡಗಬೆಳ್ಳೂರು, ಪೊಳಲಿ ಭಾಗಗಳನ್ನು ಸಂಪರ್ಕಿಸುತ್ತಿದ್ದ ಈ ಸೇತುವೆಯೇ ಗ್ರಾಮಸ್ಥರ ನಿತ್ಯ ಓಡಾಟದ ಪ್ರಮುಖ ಕೊಂಡಿಯಾಗಿತ್ತು. ಕಳೆದ ಕೆಲವು ತಿಂಗಳಿನಿಂದ ಅಪಾಯಕಾರಿಯಾಗಿದ್ದ ಸೇತುವೆಯಲ್ಲಿ ಘನವಾಹನಗಳ ಸಂಚಾರವನ್ನು ನಿಷೇಧಿಸಿ, ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಸ್ಥಳೀಯರ ಒತ್ತಾಯದ ಮೇರೆಗೆ ಇದೀಗ ಇಲಾಖೆ ಬುಲ್ಡೋಜರ್ ಮೂಲಕ ಸೇತುವೆ ತೆರವು ಕಾರ್ಯ ಆರಂಭಿಸಿದ್ದು, ಫೌಂಡೇಶನ್ ತೆರವು ಸೇರಿದಂತೆ ಸಂಪೂರ್ಣ ಕಾಮಗಾರಿಗೆ ಕೆಲವು ವಾರಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.ಸೇತುವೆ ಕುಸಿತದಿಂದ ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರು ತೋಡು ದಾಟಿ ಸಂಚರಿಸಬೇಕಾದ ಅಥವಾ ಹತ್ತಾರು ಕಿಲೋಮೀಟರ್ ಸುತ್ತುಬಳಸಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ತೋಡಿನಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಸಂಚಾರ ಇನ್ನಷ್ಟು ಅಪಾಯಕಾರಿಯಾಗಲಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಇನ್ನೆಷ್ಟು ವರ್ಷ ಕಾಯಬೇಕೋ ಎಂಬ ಆತಂಕ ಮತ್ತು ನಿರಾಶೆಯಲ್ಲಿ ಸ್ಥಳೀಯರು ದಿನ ಕಳೆಯುತ್ತಿದ್ದಾರೆ.

About The Author

Leave a Reply