

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ವಿವಾದಿತ ಶವ ಹೂತಿಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಚಾರ್ಮಾಡಿ ಘಾಟಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಂಗಳವಾರ ನಡೆದಿದೆ.ಅಪಘಾತದಲ್ಲಿ ಎಸ್‌ಐಟಿ ಎಸ್‌ಪಿ ಸಿ.ಎ. ಸೈಮನ್, ಇನ್ಸ್‌ಪೆಕ್ಟರ್ ಕುಸುಮಾಧರ್, ಪೊಲೀಸ್ ಸಿಬ್ಬಂದಿ (ಪಿಸಿ) ಮಂಜುನಾಥ್ ಹಾಗೂ ಕಾರಿನ ಚಾಲಕ ಸೇರಿದಂತೆ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ.ಧರ್ಮಸ್ಥಳದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಿಂದ ಅಧಿಕಾರಿಗಳ ತಂಡವು ಚಿಕ್ಕಮಗಳೂರಿಗೆ ಹೊರಟಿತ್ತು. ಚಿಕ್ಕಮಗಳೂರು ಜಿಲ್ಲಾ ಎಸ್‌ಪಿ ಹಾಗೂ ಎಸ್‌ಐಟಿ ತನಿಖಾಧಿಕಾರಿಯಾಗಿರುವ ಜಿತೇಂದ್ರ ಕುಮಾರ್ ದಯಾಮ ಅವರನ್ನು ಭೇಟಿ ಮಾಡಿ, ತನಿಖೆಯ ಪ್ರಗತಿ ಕುರಿತು ಚರ್ಚಿಸಲು ಅಧಿಕಾರಿಗಳು ತೆರಳುತ್ತಿದ್ದರು ಎನ್ನಲಾಗಿದೆ.ಈ ವೇಳೆ ಚಾರ್ಮಾಡಿ ಘಾಟ್ ರಸ್ತೆಯ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಇನೋವಾ ಕಾರು ರಸ್ತೆಯಲ್ಲೇ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ತಲೆಕೆಳಗಾಗಿದ್ದು, ಒಳಗಿದ್ದ ಅಧಿಕಾರಿಗಳಿಗೆ ಗಾಯಗಳಾಗಿವೆ. ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಇತರ ವಾಹನ ಸವಾರರು ತಕ್ಷಣವೇ ಧಾವಿಸಿ ಬಂದು, ಕಾರಿನಲ್ಲಿದ್ದ ಗಾಯಾಳುಗಳನ್ನು ಹೊರಗೆ ತೆಗೆಯಲು ನೆರವಾಗಿದ್ದಾರೆ.ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಾಟಿ ರಸ್ತೆಯಲ್ಲಿ ಸಂಚಾರ ಸುಗಮಗೊಳಿಸಿದ್ದಾರೆ.






