July 12, 2026
image (74)

ಬಂಟ್ವಾಳ : ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸಜಿಪನಡು ಸಮೀಪದ ದೇರಾಜೆ ಎಂಬಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಸಜಿಪನಡು ಸಮೀಪದ ಮಡ್ಯಲಚ್ಚಿಲ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಅಹ್ಮದ್ ಅಸೀರ್ (22) ಮೃತಪಟ್ಟ ದುರ್ದೈವಿ ಸವಾರ.

ಗುರುವಾರ ಸಂಜೆ ವೇಳೆ ಅಹ್ಮದ್ ಅಸೀರ್ ಅವರು ತಮ್ಮ ಆಕ್ಟಿವಾ ಸ್ಕೂಟರ್‌ನಲ್ಲಿ ಸಜಿಪ ಕಡೆಯಿಂದ ಬೇಂಕೆ ಕಡೆಗೆ ಸಂಚರಿಸುತ್ತಿದ್ದರು. ಈ ವೇಳೆ ದೇರಾಜೆ ತಲುಪುತ್ತಿದ್ದಂತೆ ಎದುರಿನಿಂದ ಅತಿ ವೇಗವಾಗಿ ಬಂದ ಕಾರೊಂದು ಸ್ಕೂಟರ್‌ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಭೀಕರತೆಗೆ ಅಸೀರ್ ಅವರು ರಸ್ತೆಗೆ ಎಸೆಯಲ್ಪಟ್ಟು, ಅವರ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದೆ. ಸ್ಥಳೀಯ ನಿವಾಸಿಗಳು ತಕ್ಷಣವೇ ರಕ್ತದ ಮಡುವಿನಲ್ಲಿದ್ದ ಅಸೀರ್ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಮೃತ ಯುವಕ ಅಹ್ಮದ್ ಅಸೀರ್ ಅವರು ಕರಾವಳಿಯ ಪ್ರಮುಖ ಸಂಘಟನೆಯಾದ ಎಸ್‌ಕೆಎಸ್‌ಎಸ್‌ಎಫ್ (SKSSF) ಇದರ ಸಮಾಜಮುಖಿ ‘ವಿಕಾಯ’ ಸಂಘಟನೆಯ ಆಕ್ಟಿವ್ ವಿಂಗ್ ಸದಸ್ಯರಾಗಿದ್ದರು. ಸ್ಥಳೀಯವಾಗಿ ಯಾವುದೇ ಸಮಾಜ ಸೇವೆ, ರಕ್ತದಾನ ಅಥವಾ ತುರ್ತು ಪರಿಸ್ಥಿತಿಗಳಿದ್ದರೂ ಸದಾ ಮುಂಚೂಣಿಯಲ್ಲಿ ನಿಂತು ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದ ಯುವಕನಾಗಿದ್ದನು. ಮೃತರು ತಂದೆ, ತಾಯಿ, ನಾಲ್ವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಒಳಗೊಂಡ ಬೃಹತ್ ಕುಟುಂಬವನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

About The Author

Leave a Reply