

ಮಂಗಳೂರು: ಪಡೀಲ್ ನ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ 12 ವರ್ಷಗಳಿಂದ ಹೂವಿನ ವ್ಯಾಪಾರ ನಡೆಸುತ್ತಿದ್ದ ವಿಕಲಚೇತನ ಬೀದಿಬದಿ ವ್ಯಾಪಾರಿಗಳ ಸ್ಟಾಲ್ ಗಳನ್ನು ನಗರಪಾಲಿಕೆ ಅಧಿಕಾರಿಗಳು ತೆರವುಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ.
75% ಅಂಗವೈಕಲ್ಯ ಹೊಂದಿರುವ ಚಂದ್ರಹಾಸ್ ಹಾಗೂ ವಿಧವೆ ಸುನೀತಾ, ಯಾವುದೇ ನೋಟಿಸ್ ಅಥವಾ ಪರ್ಯಾಯ ವ್ಯವಸ್ಥೆ ನೀಡದೆ ತಮ್ಮ ತಳ್ಳುಗಾಡಿ ಮತ್ತು ವ್ಯಾಪಾರ ಸಾಮಗ್ರಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿ ವ್ಯಾಪಾರಿಗಳ ಹಕ್ಕುಗಳನ್ನು ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.






