

ಬೆಳಗಾವಿ : ಎರಡು ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಮಾಜಿ ಸೈನಿಕನನ್ನೇ ಕೊಲೆ ಮಾಡಿದ್ದ ಪತ್ನಿಯ ಕೃತ್ಯಕ್ಕೆ ಮನನೊಂದು, ಆಕೆಯ ತಾಯಿ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿ ನಡೆದಿದೆ.
ಮಾಜಿ ಯೋಧ ಸಂದೀಪ್ ಮಂಜರಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುಮಾ ಮಂಜರಗಿ ಅವರ ತಾಯಿ ಮಹಾದೇವಿ ಬದಾಮಿ (57) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮಗಳು ಪೊಲೀಸರಿಂದ ಬಂಧನಕ್ಕೊಳಗಾಗುತ್ತಿದ್ದಂತೆ ತೀವ್ರ ಆಘಾತಕ್ಕೊಳಗಾಗಿದ್ದ ಮಹಾದೇವಿ ಅವರು, ಮರ್ಯಾದೆಗೆ ಅಂಜಿ ಮತ್ತು ಮಾನಸಿಕ ಜರ್ಜರಿತೆಯಿಂದ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಯೋಧ ಸಂದೀಪ್ ಮಂಜರಗಿ ಹೆಸರಿನಲ್ಲಿ ಎಚ್‌ಡಿಎಫ್‌ಸಿ (HDFC) ಮತ್ತು ಎಸ್‌ಬಿಐ (SBI) ಬ್ಯಾಂಕುಗಳಲ್ಲಿ ವಿಮಾ ಪಾಲಿಸಿಗಳಿದ್ದವು. ಅಪಘಾತದಲ್ಲಿ ಸಂದೀಪ್ ಮೃತಪಟ್ಟರೆ ಸುಮಾರು ₹2 ಕೋಟಿ ವಿಮಾ ಮೊತ್ತ ಸಿಗಲಿದೆ ಎಂಬ ಕಾರಣಕ್ಕೆ ಪತ್ನಿ ಸುಮಾ, ತನ್ನ ಪ್ರಿಯಕರ ಹಾಗೂ ಇತರರೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದಳು. ಬಳಿಕ ಇದನ್ನು ಸಹಜ ಸಾವು ಎಂದು ಬಿಂಬಿಸಲು ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿದ್ದರು.
ಪ್ರಕರಣದ ನಿಗೂಢತೆಯನ್ನು ಭೇದಿಸಿದ್ದ ಪೊಲೀಸರು ಮೃತನ ಪತ್ನಿ ಸುಮಾ ಮಂಜರಗಿ, ಆಕೆಯ ಪ್ರಿಯಕರ ಹಾಗೂ ಕೆಲ ಸರ್ಕಾರಿ ನೌಕರರು ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಮಗಳ ಈ ಅಮಾನವೀಯ ಕೃತ್ಯ ಇಡೀ ಸಮಾಜದಲ್ಲಿ ತಲೆತಗ್ಗಿಸುವಂತೆ ಮಾಡಿದ್ದರಿಂದ ತಾಯಿ ಮಹಾದೇವಿ ಅವರು ಮನನೊಂದು ತಮ್ಮ ಜೀವನವನ್ನೇ ಮುಗಿಸಿಕೊಂಡಿದ್ದಾರೆ.






