June 25, 2026
WhatsApp Image 2026-06-24 at 11.12.18 PM

ಬಂಟ್ವಾಳ: ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಕುರಿತು ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಬೂತ್ ಲೆವೆಲ್ ಏಜೆಂಟರಿಗೆ (BLA) ಜಾಗೃತಿ ಮೂಡಿಸುವ ಉದ್ದೇಶದಿಂದ ಕೊಳ್ನಾಡು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೊಳ್ನಾಡು, ಮಂಚಿ, ಸಾಲೆತ್ತೂರು, ಕನ್ಯಾನ ಹಾಗೂ ಕರೋಪಾಡಿ ವಲಯಗಳ BLA ಗಳಿಗೆ ಜಾಗೃತಿ ಸಭೆ ನಡೆಯಿತು.

ಕೊಳ್ನಾಡು, ಮಂಚಿ ಹಾಗೂ ಸಾಲೆತ್ತೂರು ವಲಯಗಳ ಜಾಗೃತಿ ಸಭೆಯು ಕೊಳ್ನಾಡು ಸೌಹಾರ್ದ ಭವನದಲ್ಲಿ ನಡೆದರೆ, ಕನ್ಯಾನ ಹಾಗೂ ಕರೋಪಾಡಿ ವಲಯಗಳ ಸಭೆಯು ಕನ್ಯಾನ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ವಲಯಗಳ ಪದಾಧಿಕಾರಿಗಳು, BLA ಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ SIR ಪ್ರಕ್ರಿಯೆಯ ಮಹತ್ವ ಮತ್ತು ಮತದಾರರ ಹಕ್ಕುಗಳ ರಕ್ಷಣೆಯ ಕುರಿತು ಚರ್ಚಿಸಲಾಯಿತು

“ಬಿಜೆಪಿಗರು ಬುದ್ದಿವಂತರು; ನಾವು ದಡ್ಡರಾಗಬಾರದು” – ರಮನಾಥ ರೈ

ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಚಿವರಾದ ಬಿ. ರಮಾನಾಥ ರೈ ಮಾತನಾಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ BLA ಗಳಿಗೆ ಈಗಾಗಲೇ ಹಲವು ಬಾರಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅದರ ಫಲವಾಗಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ಕಾರ್ಯಕರ್ತರು ಹೆಚ್ಚಿನ ಜಾಗೃತಿಯಿಂದ ತೊಡಗಿಕೊಂಡಿದ್ದಾರೆ ಎಂದರು. ಇದೀಗ ಈ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮಟ್ಟಕ್ಕೂ ವಿಸ್ತರಿಸಲಾಗಿದ್ದು, ಪ್ರತಿಯೊಬ್ಬ BLA ತನ್ನ ವ್ಯಾಪ್ತಿಯ ಮತದಾರರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು ಎಂದು ಸಲಹೆ ನೀಡಿದರು.

SIR ಪ್ರಕ್ರಿಯೆಯಿಂದ ಲಾಭವಾಗಲಿ ಅಥವಾ ನಷ್ಟವಾಗಲಿ, ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈತಪ್ಪಬಾರದು. ಬೂತ್ ಮಟ್ಟದ ಅಧಿಕಾರಿಗಳಾದ BLO ಗಳೊಂದಿಗೆ ಉತ್ತಮ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವುದು BLA ಗಳ ಪ್ರಮುಖ ಜವಾಬ್ದಾರಿಯಾಗಿದೆ. ಪ್ರತಿಯೊಂದು ಅರ್ಜಿಯನ್ನೂ ಎಚ್ಚರಿಕೆಯಿಂದ ಪರಿಶೀಲಿಸಿ, ಯಾವುದೇ ಮತದಾರನ ಹಕ್ಕಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

“ಬಿಜೆಪಿಗರು ಬುದ್ದಿವಂತರು; ಆದರೆ ನಾವು ದಡ್ಡರಾಗಬಾರದು. ಅವರು ರೂಪಿಸುವ ಪ್ರತಿಯೊಂದು ರಾಜಕೀಯ ತಂತ್ರವನ್ನು ಅರ್ಥಮಾಡಿಕೊಂಡು ಅದಕ್ಕೆ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಉತ್ತರ ನೀಡುವ ಸಾಮರ್ಥ್ಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇರಬೇಕು. ದುರ್ಬಲ, ಹಿಂದುಳಿದ ಹಾಗೂ ದಮನಿತ ವರ್ಗಗಳ ಜನರು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವುದು ಕೆಲವರಿಗೆ ಅಸೂಯೆಯ ವಿಷಯವಾಗಿದೆ. ಅಂತಹ ವರ್ಗಗಳ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಯಾವುದೇ ಪ್ರಯತ್ನಗಳ ವಿರುದ್ಧ ಎಚ್ಚರಿಕೆಯಿಂದ ಹೋರಾಡಬೇಕಿದ್ದು, ಪ್ರತಿಯೊಬ್ಬ BLA ಮತದಾರರ ಹಕ್ಕುಗಳ ಕಾವಲುಗಾರನಾಗಿ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.

ಇತರ ರಾಜ್ಯಗಳ ಅನುಭವದಿಂದ ಪಾಠ ಕಲಿಯಬೇಕು – ಎಂ.ಎಸ್. ಮಹಮ್ಮದ್

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬಂಟ್ವಾಳ–ಸುಳ್ಯ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳಾದ ಎಂ.ಎಸ್. ಮಹಮ್ಮದ್ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಮತದಾರರ ಜಾಗೃತಿಯ ಮಹತ್ವವನ್ನು ಸಾಬೀತುಪಡಿಸಿವೆ ಎಂದರು. ಕೇರಳ ಹಾಗೂ ತಮಿಳುನಾಡಿನ ಮತದಾರರು ತಮ್ಮ ಪ್ರಜಾಪ್ರಭುತ್ವದ ಹಕ್ಕುಗಳನ್ನು ಸಮರ್ಥವಾಗಿ ಬಳಸಿಕೊಂಡು ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವಾದಗಳಿಂದ ಪಾಠ ಕಲಿಯಬೇಕಿದ್ದು, ಅಂತಹ ಬೆಳವಣಿಗೆಗಳು ಕರ್ನಾಟಕದಲ್ಲಿ ಮರುಕಳಿಸದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ BLA ಗಳು ಹೆಚ್ಚಿನ ಜಾಗ್ರತೆ ವಹಿಸಬೇಕು. ಮತದಾರರ ಪಟ್ಟಿಯ ಪರಿಷ್ಕರಣೆ ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ, ಅದು ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುವ ಮಹತ್ವದ ಕಾರ್ಯವಾಗಿದೆ ಎಂದು ಅವರು ಹೇಳಿದರು.

ಪ್ರತಿದಿನ SIR ವರದಿ ಸಲ್ಲಿಕೆಗೆ ಒತ್ತು – ಚಂದ್ರಶೇಖರ ಭಂಡಾರಿ

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಮಾತನಾಡಿ, SIR ಪ್ರಕ್ರಿಯೆಯ ಆರಂಭದಿಂದಲೇ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, BLA ಗಳ ಸಹಕಾರ ಅತ್ಯಗತ್ಯವಾಗಿದೆ ಎಂದರು. ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸದ BLA ಗಳನ್ನು ಬದಲಿಸಿ ಜವಾಬ್ದಾರಿಯುತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬೇಕು. ಮುಂದಿನ ಒಂದು ತಿಂಗಳ ಕಾಲ ಪ್ರತಿದಿನ ಆಯಾ ಬೂತ್‌ಗಳ ಕಾರ್ಯಚಟುವಟಿಕೆಗಳ ಕುರಿತು ವರದಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಮತದಾರರ ಪಟ್ಟಿಯ ಪ್ರತಿಯೊಂದು ಸೇರ್ಪಡೆ, ತಿದ್ದುಪಡಿ ಹಾಗೂ ಬದಲಾವಣೆಗಳ ಮಾಹಿತಿಯನ್ನು ನಿಯಮಿತವಾಗಿ ಪಕ್ಷದ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

“ಮತದಾರರ ಹಕ್ಕುಗಳ ರಕ್ಷಣೆಯೇ ನಮ್ಮ ಪ್ರಮುಖ ಗುರಿ” – ಕುಳಾಲು ಸುಭಾಶ್ಚಂದ್ರ ಶೆಟ್ಟಿ

ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಮತದಾರರ ಪಟ್ಟಿ ಕೇವಲ ಚುನಾವಣಾ ದಾಖಲೆ ಅಲ್ಲ, ಅದು ಪ್ರಜಾಪ್ರಭುತ್ವದ ಜೀವಾಳವಾಗಿದೆ ಎಂದರು. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಹಾಗೂ BLA ತನ್ನ ಬೂತ್ ವ್ಯಾಪ್ತಿಯ ಪ್ರತಿಯೊಂದು ಕುಟುಂಬವನ್ನು ಸಂಪರ್ಕಿಸಿ ಮತದಾರರ ಪಟ್ಟಿಯನ್ನು ಪರಿಶೀಲಿಸುವ ಕಾರ್ಯವನ್ನು ಗಂಭೀರವಾಗಿ ಕೈಗೊಳ್ಳಬೇಕು. ಸಂಘಟಿತ ಪ್ರಯತ್ನ, ನಿರಂತರ ಜಾಗೃತಿ ಹಾಗೂ ಸಮರ್ಪಿತ ಕಾರ್ಯದಿಂದಲೇ ಮತದಾರರ ಹಕ್ಕುಗಳನ್ನು ರಕ್ಷಿಸಲು ಸಾಧ್ಯ. ಯಾವುದೇ ಅರ್ಹ ಮತದಾರನ ಹೆಸರು ಪಟ್ಟಿಯಿಂದ ಕೈತಪ್ಪದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಬಿಜೆಪಿಯ ಕುತಂತ್ರಗಳಿಗೆ ನಾವು ಬಲಿಯಾಗಬಾರದು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಿ, ಬಿಜೆಪಿಯನ್ನು ರಾಜಕೀಯವಾಗಿ ಸೋಲಿಸುವ ದೃಢ ನಿಲುವನ್ನು ಪ್ರತಿಯೊಬ್ಬ ಕಾರ್ಯಕರ್ತ ಹೊಂದಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸಭೆಗೆ ಆಗಮಿಸಿದ ಗಣ್ಯರು, BLA ಗಳು ಹಾಗೂ ಕಾರ್ಯಕರ್ತರನ್ನು ಸ್ವಾಗತಿಸಿದರು.

ಹಸೈನಾರ್ ತಾಳಿತ್ತನೂಜಿ ಅವರು SIR ಕುರಿತು ಮಾಹಿತಿ‌ ಕಾರ್ಯಾಗಾರ ನಡೆಸಿಕೊಟ್ಟು, BLA ಗಳಿಗೆ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಮತದಾರರ ಪಟ್ಟಿಯ ಪರಿಶೀಲನೆ, ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಪ್ರಕ್ರಿಯೆಗಳ ಕುರಿತು ವಿವರಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ‌ ಸದಸ್ಯರಾದ ಶ್ರೀ.ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಪಾಣೆಮಂಗಳೂರು ಮಹಿಳಾ ಕಾಂಗ್ರೇಸ್ ಅದ್ಯಕ್ಷರಾದ ಶ್ರೀಮತಿ ಐಡಾ ಸುರೇಶ್,ಜಿಲ್ಲಾ ಕಾಂಗ್ರೇಸ್ ಪ್ರದಾನ ಕಾರ್ಯದರ್ಶಿ ಅಶ್ರಪ್ ಸಾಲೆತ್ತೂರು,ವಲಯಾದ್ಯಕ್ಷರಾದ ಶ್ರೀ.ಪವಿತ್ರಪೂಂಜಾ,ಅಬೂಬಕ್ಕರ್ ಮಂಚಿ,ಶರೀಪ್ ಸಾಲೆತ್ತೂರು,ಅಬ್ದುಲ್ ಮಜೀದ್ ಕನ್ಯಾನ, ಜಿಲ್ಲಾ ಪ್ರದಾನ ಕಾರ್ದರ್ಶಿ ಅಬ್ದುಲ್ ರಹಿಮಾನ್ (ಅಂದುಮಾ )ಕನ್ಯಾನ, ಪ್ರಮುಖರಾದ ಜಿ.ಎಂ.ಇಬ್ರಾಹಿಂ ಮಂಚಿ,ಅನ್ವರ್ ಕರೋಪಾಡಿ,ಸೂರ್ಯಕಾಂತಿ,ಎ.ಬಿ.ಅಬ್ದುಲ್ಲಾ, ಕೊಳ್ನಾಡು ವಲಯ ಪ್ರದಾನ ಕಾರ್ಯದರ್ಶಿ ಖಾದರ್ ನಾರ್ಶ, ದಾಮೋದರ್ ಕನ್ಯಾನ,ಬದ್ರುದ್ದೀನ್ ಮಂಚಿ,ಹಸೈನಾರ್ ಡಿ.ಸಾಲೆತ್ತೂರು,ಸೇರಿದಂತೆ ಜಿಲ್ಲಾ,ಬ್ಲಾಕ್ ಕಾಂಗ್ರೇಸ್ ಪಧಾದಿಕಾರಿಗಳು,ಬಿ.ಎಲ್.ಎ ಗಳು,ವಿವಿಧ ಮುಂಚೂಣಿ ಘಟಕದ ಮುಖಂಡರು‌,ಕಾರ್ಯಕರ್ತರು ಉಪಸ್ಥಿತರಿದ್ದರು. ಶ್ರೀ.ಪವಿತ್ರ ಪೂಂಜಾ ಹಾಗೂ ಅನ್ವರ್ ಕರೋಪಾಡಿ ಧನ್ಯವಾದ ತಿಳಿಸಿದರು

About The Author

Leave a Reply