

ಬೆಳಗಾವಿ: ಪತಿಯ ಆಪ್ತ ಸ್ನೇಹಿತನ ಜೊತೆ ವಿವಾಹಿತ ಮಹಿಳೆಯೊಬ್ಬಳು ಪರಾರಿಯಾದ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಪತಿ ಹಾಗೂ ಆಕೆಯ ಕುಟುಂಬಸ್ಥರು ಯುವಕನ ಮನೆಗೆ ನುಗ್ಗಿ ಭೀಕರ ದಾಂಧಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ಜರುಗಿದೆ.
ಯಮಕನಮರಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ತಲ್ವಾರ್, ಜಂಬೆ ಹಾಗೂ ಮಾರಕಾಸ್ತ್ರಗಳನ್ನು ಹಿಡಿದು ಬಂದ 30ಕ್ಕೂ ಹೆಚ್ಚು ಜನರ ಉದ್ರಿಕ್ತ ಗುಂಪು ಅಟ್ಟಹಾಸ ಮೆರೆದಿದೆ. ಈ ಮಾರಣಾಂತಿಕ ದಾಳಿಯ ವೇಳೆ ಮನೆಯಲ್ಲಿದ್ದ ಆರು ಪುಟ್ಟ ಮಕ್ಕಳು ಸೇರಿ ಒಟ್ಟು ಹತ್ತು ಜನ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಗ್ರಾಮದ ನಿವಾಸಿಗಳಾದ ಬಸಪ್ಪ ನಾಯಕ್ ಮತ್ತು ಯಲ್ಲಪ್ಪ ನಾಯಕ್ ಆಪ್ತ ಸ್ನೇಹಿತರಾಗಿದ್ದರು. ಕಳೆದ ವರ್ಷವಷ್ಟೇ ಬಸಪ್ಪ ಮತ್ತು ನಾಗವ್ವ ಎಂಬಾಕೆಯ ವಿವಾಹ ನಡೆದಿತ್ತು. ಬೆಳಗಾವಿಯ ಖಾಸಗಿ ಕಂಪನಿಯೊಂದರಲ್ಲಿ ಈ ದಂಪತಿ ಹಾಗೂ ಯಲ್ಲಪ್ಪ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಪತಿಯ ಸ್ನೇಹಿತ ಯಲ್ಲಪ್ಪ ಹಾಗೂ ನಾಗವ್ವ ನಡುವೆ ಸಲುಗೆ ಬೆಳೆದು, ಅದು ಪ್ರೇಮಕ್ಕೆ ತಿರುಗಿದೆ. ಇದೇ ಕಾರಣಕ್ಕೆ ಎರಡು ದಿನಗಳ ಹಿಂದೆ ನಾಗವ್ವ ಮತ್ತು ಯಲ್ಲಪ್ಪ ಇಬ್ಬರೂ ಊರು ಬಿಟ್ಟು ಓಡಿಹೋಗಿದ್ದರು. ಇದರಿಂದ ತೀವ್ರ ಕೆರಳಿದ ಬಸಪ್ಪ ಹಾಗೂ ನಾಗವ್ವಳ ಪೋಷಕರು ಯಲ್ಲಪ್ಪನ ಮನೆಗೆ ನುಗ್ಗಿ ಕಲ್ಲು ತೂರಾಟ ನಡೆಸಿ, ಹೆಂಚುಗಳನ್ನು ಪುಡಿಪುಡಿ ಮಾಡಿದ್ದಾರೆ.
ಮನೆಯೊಳಗೆ ನುಗ್ಗಿದ ದಾಳಿಕೋರರು ಟಿವಿ, ಪೀಠೋಪಕರಣಗಳು ಹಾಗೂ ತಿಜೋರಿಯನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಕೊಟ್ಟಿಗೆಯಲ್ಲಿದ್ದ 15 ಕುರಿಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ. ವಿಕೃತಿಯ ಪರಾಕಾಷ್ಠೆ ಎಂಬಂತೆ, ಕದ್ದ ತಂದ ಕುರಿಗಳನ್ನು ಕೊಂದು ದುಷ್ಕರ್ಮಿಗಳ ಗುಂಪು ಭರ್ಜರಿ ಪಾರ್ಟಿ ಮಾಡಿದೆ ಎನ್ನಲಾಗಿದೆ. ದುಷ್ಕರ್ಮಿಗಳ ಈ ಅಟ್ಟಹಾಸದಿಂದಾಗಿ ಯಲ್ಲಪ್ಪನ ಪೋಷಕರು ಹಾಗೂ ಸಹೋದರಿಯರು ತೀವ್ರವಾಗಿ ಭಯಭೀತರಾಗಿದ್ದಾರೆ.
ಸದ್ಯ ನಾಗರಾಜ್ ನಾಯಕ್, ರವಿ, ಈಶ್ವರ, ಶಿವಪ್ಪ ಸೇರಿದಂತೆ ಹಲವರ ವಿರುದ್ಧ ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.






