

ಬಂಟ್ವಾಳ: ಇಲ್ಲಿನ ಬಿಸಿ ರೋಡ್ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದ ಬಳಿ ಗುರುವಾರ ಸಂಜೆ ಯುವತಿಯನ್ನು ಸಾರ್ವಜನಿಕವಾಗಿ ಆಯುಧದಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಪೊಲೀಸ್ ವಶಕ್ಕೆ ಸಿಗುವ ಮುನ್ನವೇ ಆರೋಪಿ ಇಲಿ ಪಾಷಣ (ವಿಷ) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏಕಪಕ್ಷೀಯ ಪ್ರೇಮದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಬಸ್ಸಿಗಾಗಿ ಕಾಯುತ್ತಿದ್ದ 21-25 ವರ್ಷ ಪ್ರಾಯದ ಯುವತಿ ಲಾವಣ್ಯಾಳನ್ನು ಚೇತನ್ ಎಂಬಾತ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾಗಿದ್ದ ಬಂಟ್ವಾಳ ಪೊಲೀಸರು ಆರೋಪಿಯ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಯ ಬೆನ್ನಟ್ಟಿದ ಪೊಲೀಸರು ಕೊನೆಗೂ ಆತನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ತನ್ನನ್ನು ಬಂಧಿಸುವುದು ಖಚಿತ ಎಂದು ತಿಳಿಯುತ್ತಿದ್ದಂತೆ ಆರೋಪಿ ಚೇತನ್ ಇಲಿ ಪಾಷಣ ಸೇವಿಸಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ತಕ್ಷಣ ಆತ ವಿಷ ಸೇವಿಸಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ತಕ್ಷಣವೇ ಆತನನ್ನು ವೈದ್ಯಕೀಯ ತಪಾಸಣೆ ಹಾಗೂ ತುರ್ತು ಚಿಕಿತ್ಸೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ಮುಂದುವರಿದಿದೆ.
“ಕೊಲೆ ಕೃತ್ಯ ಎಸಗಿದ ಆರೋಪಿ ಚೇತನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಆತ ಇಲಿ ಪಾಷಣ ಸೇವಿಸಿರುವುದರಿಂದ ತಪಾಸಣೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಚೇತರಿಸಿಕೊಂಡ ಬಳಿಕ ಆತನ ವಿಚಾರಣೆಯಿಂದ ಕೊಲೆಯ ಹಿಂದಿನ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕಿದೆ. ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ತನಿಖೆಯ ನಂತರ ನೀಡಲಾಗುವುದು,” ಎಂದು ಪೊಲೀಸರು ತಿಳಿಸಿದ್ದಾರೆ.





