

ಬೆಂಗಳೂರಲ್ಲಿ ನಗರದ ವೈಟ್ಫೀಲ್ಡ್ ವಿಭಾಗದ ಡಿಸಿಪಿ (DCP) ಸೈದುಲ್ಲಾ ಆಡಾವತ್ ನೇತೃತ್ವದಲ್ಲಿ ತಡರಾತ್ರಿ ರೌಡಿಶೀಟರ್ಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ, ತೀವ್ರ ಪರಿಶೀಲನೆ ನಡೆಸಲಾಗಿದೆ.

ಮಧ್ಯರಾತ್ರಿ ನಡೆದ ಬಿರುಗಾಳಿ ಕಾರ್ಯಾಚರಣೆ
ಕಾಟಾಚಾರದ ತಪಾಸಣೆ ನಡೆಸದ ಪೊಲೀಸರು, ತಡರಾತ್ರಿ 12 ಗಂಟೆಯಿಂದ ಮುಂಜಾನೆ 3 ಗಂಟೆಯವರೆಗೆ ಸತತ ಮೂರು ಗಂಟೆಗಳ ಕಾಲ ರೌಡಿಗಳ ಮನೆಗಳನ್ನು ಜಾಲಾಡಿದ್ದಾರೆ. ಒಟ್ಟು 140 ಸಿಬ್ಬಂದಿಯನ್ನೊಳಗೊಂಡ 28 ಪೊಲೀಸ್ ಅಧಿಕಾರಿಗಳ ಪ್ರತ್ಯೇಕ ತಂಡಗಳು ಏಕಕಾಲಕ್ಕೆ ನಗರದ ವಿವಿಧೆಡೆ ದಾಳಿ ನಡೆಸಿವೆ.
150ಕ್ಕೂ ಹೆಚ್ಚು ರೌಡಿಗಳಿಗೆ ಪೊಲೀಸರ ಶಾಕ್!
ವೈಟ್ಫೀಲ್ಡ್, ವರ್ತೂರು, ಮಹದೇವಪುರ, ಕೆ.ಆರ್.ಪುರಂ ಹಾಗೂ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಒಟ್ಟು 150ಕ್ಕೂ ಹೆಚ್ಚು ರೌಡಿಶೀಟರ್ಗಳ ಮನೆಗಳನ್ನು ತಪಾಸಣೆ ಒಳಪಡಿಸಲಾಗಿದ್ದು, ಕೆಲವರನ್ನು ರಸ್ತೆಯಲ್ಲೇ ತಡೆದು ಅವರ ವಾಹನಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ.
ದಾಖಲೆ ಇಲ್ಲದ ವಾಹನಗಳು ಸೀಜ್: ತಪಾಸಣೆ ವೇಳೆ ಸೂಕ್ತ ದಾಖಲೆಗಳಿಲ್ಲದ 13 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಡಕ್ ವಾರ್ನಿಂಗ್: ಯಾವುದೇ ಕಾರಣಕ್ಕೂ ಮತ್ತೆ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಬಾರದು ಎಂದು ರೌಡಿಗಳಿಗೆ ಪೊಲೀಸರು ತೀವ್ರ ಎಚ್ಚರಿಕೆ ನೀಡಿದ್ದಾರೆ.





