

ಮುಸ್ಲಿಂ ವ್ಯಕ್ತಿಯೊಬ್ಬರ ಮೊದಲ ವಿವಾಹವು ರದ್ದಾಗದ ಹೊರತು, ಅವರು ‘ವಿಶೇಷ ವಿವಾಹ ಕಾಯಿದೆ’ಯಡಿ (Special Marriage Act) ಮಾಡಿಕೊಳ್ಳುವ ಎರಡನೇ ವಿವಾಹವು ಕಾನೂನುಬದ್ಧವಾಗಿ ಅನೂರ್ಜಿತಗೊಳ್ಳುತ್ತದೆ (Void) ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮುಸ್ಲಿಂ ವೈಯಕ್ತಿಕ ಕಾನೂನು ಬಹುಪತ್ನಿತ್ವಕ್ಕೆ ಅವಕಾಶ ನೀಡುತ್ತದೆಯಾದರೂ, ಒಮ್ಮೆ ವಿಶೇಷ ವಿವಾಹ ಕಾಯಿದೆಯನ್ನು ಆಯ್ಕೆ ಮಾಡಿಕೊಂಡರೆ ಅದಕ್ಕೆ ಸಂಬಂಧಿಸಿದ ಶಾಸನಬದ್ಧ ನಿಯಮಗಳೇ ಅನ್ವಯಿಸುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಮೊದಲ ಮದುವೆ ಅಸ್ತಿತ್ವದಲ್ಲಿರುವಾಗಲೇ ವಿಶೇಷ ವಿವಾಹ ಕಾಯಿದೆಯಡಿ ಎರಡನೇ ಮದುವೆಯಾದ ಮಹಿಳೆಯನ್ನು ಆ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಪ್ರಮುಖವಾಗಿ ತಿಳಿಸಿದೆ. ಮುಸ್ಲಿಂ ವ್ಯಕ್ತಿಯ ಎರಡನೇ ಪತ್ನಿಯಾಗಿದ್ದ ಬಳ್ಳಾರಿಯ ಮೀನಾಕುಮಾರಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಧಾರವಾಡ ಪೀಠದಲ್ಲಿ ನಡೆಸಿದ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿದೆ.
ವಿಚಾರಣೆ ವೇಳೆ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ಮುಸ್ಲಿಂ ವೈಯಕ್ತಿಕ ಕಾನೂನು ಪುರುಷರಿಗೆ ಒಂದಕ್ಕಿಂತ ಹೆಚ್ಚು ವಿವಾಹ ಮಾಡಿಕೊಳ್ಳಲು ಅವಕಾಶ ನೀಡುತ್ತದೆ ಎಂಬುದು ನಿಜ. ಆದರೆ, ಆ ವಿವಾಹಗಳು ವೈಯಕ್ತಿಕ ಕಾನೂನಿನ ಚೌಕಟ್ಟಿನಲ್ಲಿ ಮತ್ತು ಶಾಸ್ತ್ರೋಕ್ತವಾಗಿ ನಡೆದಾಗ ಮಾತ್ರ ಆ ಕಾನೂನಿನ ಸ್ಥಾನಮಾನ ಚಾಲ್ತಿಯಲ್ಲಿರುತ್ತದೆ. ಬದಲಿಗೆ ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾಗಲು ಆಯ್ಕೆ ಮಾಡಿಕೊಂಡರೆ, ವೈಯಕ್ತಿಕ ಕಾನೂನಿನ ಸ್ಥಾನಮಾನಗಳು ಸಂಪೂರ್ಣವಾಗಿ ಬದಲಾಗುತ್ತವೆ ಎಂದು ಪೀಠ ವಿವರಿಸಿದೆ.
ಒಮ್ಮೆ ಕಕ್ಷಿದಾರರು ತಮ್ಮ ವೈಯಕ್ತಿಕ ಕಾನೂನಿನ ಬದಲು ವಿಶೇಷ ವಿವಾಹ ಕಾಯಿದೆಯ ನಿಬಂಧನೆಗಳನ್ನು ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಂಡರೆ, ಅವರು ಸಂಸತ್ತು ಜಾರಿಗೊಳಿಸಿದ ಶಾಸನಬದ್ಧ ಆಡಳಿತಕ್ಕೆ ತಮ್ಮನ್ನು ತಾವು ಒಳಪಡಿಸಿಕೊಳ್ಳುತ್ತಾರೆ. ಆದ್ದರಿಂದ ಇಂತಹ ಮದುವೆಗಳಿಂದ ಬರುವ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ವೈಯಕ್ತಿಕ ಕಾನೂನಿನ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ; ಬದಲಾಗಿ ವಿಶೇಷ ವಿವಾಹ ಕಾಯಿದೆಯ ಕಟ್ಟುನಿಟ್ಟಿನ ನಿಯಮಗಳ ಪ್ರಕಾರವೇ ನಿರ್ಧರಿಸಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.






