

ಬಂಟ್ವಾಳ: ಗ್ರಾಮ ಸ್ವರಾಜ್ ಪ್ರತಿಷ್ಠಾನ (ರಿ), ಮಂಗಳೂರು ಇದರ ವತಿಯಿಂದ ಭಾರತ್ ಜೋಡೋ ಕಾರ್ಯಾಗಾರ ಹಾಗೂ ಸ್ನೇಹಕೂಟ ಕಾರ್ಯಕ್ರಮವು ರಾಯಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರು ಹಾಗೂ ಭಾರತ್ ಜೋಡೋ ಸಂಘಗಳ ಜಿಲ್ಲಾ ಸಂಯೋಜಕರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವರಾದ ಶ್ರೀ ಬಿ. ರಮಾನಾಥ ರೈ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರ ಯುವಜನರ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದು, ಕಲೆ, ಸಂಸ್ಕೃತಿ, ಕ್ರೀಡೆ, ಕೌಶಲ್ಯಾಭಿವೃದ್ಧಿ, ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಯುವಕರನ್ನು ಸಂಘಟಿಸಿ ಅವರ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯುವ ಸಂಘಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಭಾರತ್ ಜೋಡೋ ಸಂಘಗಳ ಉದ್ದೇಶ, ಸಂಘಟನೆ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಯುವಕ ಸಂಘಗಳು ಸ್ವಯಂಪ್ರೇರಿತವಾಗಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದವು. ಇತ್ತೀಚಿನ ದಿನಗಳಲ್ಲಿ ನಿಷ್ಕ್ರಿಯವಾಗಿರುವ ಯುವ ಸಂಘಟನೆಗಳಿಗೆ ಹೊಸ ಚೈತನ್ಯ ನೀಡುವ ಮೂಲಕ, ಜಾತಿ–ಧರ್ಮದ ಭೇದಗಳನ್ನು ಮೀರಿ ಜಾತ್ಯತೀತ ಮನೋಭಾವದ ಯುವಕರನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಲು ಭಾರತ್ ಜೋಡೋ ಸಂಘಗಳು ಉತ್ತಮ ಅವಕಾಶವಾಗಿವೆ ಎಂದು ಅವರು ಹೇಳಿದರು.


ಯುವಶಕ್ತಿಯನ್ನು ಸಮಾಜದ ಅಭಿವೃದ್ಧಿಯತ್ತ ಕೊಂಡೊಯ್ಯುವುದು, ಸಹೋದರತ್ವ, ಸೌಹಾರ್ದತೆ ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವುದು ಈ ಸಂಘಟನೆಗಳ ಪ್ರಮುಖ ಆಶಯವಾಗಬೇಕು ಎಂದು ಶೆಟ್ಟಿಯವರು ಕರೆ ನೀಡಿದರು.
ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ನ್ಯಾಯವಾದಿಗಳಾದ ಶ್ರೀ ಅಶ್ವಿನ್ ಕುಮಾರ್ ರೈ, ಕಳೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಪದ್ಮರಾಜ್ ಆರ್. ಪೂಜಾರಿ ಹಾಗೂ ಶ್ರೀಮತಿ ಶೈಲಜಾ ರಾಜೇಶ್ ಅವರು ಸಂದರ್ಭೋಚಿತವಾಗಿ ಮಾತನಾಡಿ, ಭಾರತ್ ಜೋಡೋ ಸಂಘಗಳ ಉದ್ದೇಶ ಹಾಗೂ ಯುವಜನರ ಸಂಘಟನೆಯ ಅಗತ್ಯತೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ನೀಟ್ ಮೂಲಕ ವೈದ್ಯಕೀಯ ಸೀಟು ಪಡೆದ ಸಂಜನಾ ಜೆ. ಕೊಯಿಲ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ರಾಮಚಂದ್ರ ಶೆಟ್ಟಿ ಸ್ವಾಗತಿಸಿದರು. ಜಗದೀಶ್ ಕೊಯಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ್ ನಾಯಕ್ ವಂದಿಸಿದರು. ಉಮೇಶ್ ಹಿಂಗಾನಿ ನಿರೂಪಿಸಿದರು. ಸಹ ಸಂಯೋಜಕರಾದ ಮೋಹನ್ ರಾಯಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್,ಪಿಯೂಸ್ ರೋಡ್ರಿಗಸ್,ಬೇಬಿ ಕುಂದರ್,ಸುದರ್ಶನ್ ಜೈನ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.






