October 2, 2026
WhatsApp Image 2026-10-02 at 3.16.23 PM

ಮುಜಫ್ಫರ್‌ನಗರ ಪ್ರಿಯಕರನೊಂದಿಗೆ ಜೀವನ ನಡೆಸುವ ಉದ್ದೇಶದಿಂದ ಪತ್ನಿಯೊಬ್ಬಳು ₹10 ಲಕ್ಷಕ್ಕೆ ಜಮೀನು ಮಾರಿ, ತನ್ನ ಗಂಡನ ಹತ್ಯೆಗೆ ಇಬ್ಬರಿಗೆ ಸುಪಾರಿ ನೀಡಿದ ಆರೋಪದ ಘಟನೆ ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ನಡೆದಿದೆ. 52 ವರ್ಷದ ರೈತ ಪ್ರವೀಣ್ ಅಲಿಯಾಸ್ ಪರ್ವಿಂದರ್ ಸೆ.27ರಂದು ಅರಣ್ಯ ಪ್ರದೇಶದಲ್ಲಿ ಗುಂಡೇಟಿಗೆ ಬಲಿಯಾಗಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಎರಡೂವರೆ ದಿನಗಳಲ್ಲಿ ಪ್ರಕರಣವನ್ನು ಭೇದಿಸಿದ್ದು, ಪತ್ನಿ ರೇಖಾ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ರೇಖಾ 2018-19ರಿಂದ ಕುಟುಂಬದ ಪರಿಚಯಸ್ಥ ಹಾಗೂ ಗುತ್ತಿಗೆದಾರ ವಿಕಾಸ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಳು. ಇಬ್ಬರೂ ಮದುವೆಯಾಗಲು ಬಯಸಿದ್ದರು. ಈ ವಿಚಾರ ಪ್ರವೀಣ್‌ಗೆ ತಿಳಿದು ಆತ ವಿರೋಧಿಸಿದ್ದರಿಂದ, ರೇಖಾ ಮತ್ತು ವಿಕಾಸ್ ಸೇರಿ ಆತನನ್ನು ದಾರಿಯಿಂದಲೇ ತೆಗೆದುಹಾಕಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಹತ್ಯೆಗೆ ಹಣ ಹೊಂದಿಸಲು ರೇಖಾ ತನ್ನ ಜಮೀನಿನ ಒಂದು ಭಾಗವನ್ನು ₹10 ಲಕ್ಷಕ್ಕೆ ಮಾರಾಟ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ವಿಕಾಸ್, ರಾಜಾ ಅಲಿಯಾಸ್ ಕಾಲಾ ಮತ್ತು ಕಲ್ಯಾಣ್ ಸಿಂಗ್ ಅವರನ್ನು ಸಂಪರ್ಕಿಸಿದ್ದ. ಹತ್ಯೆ ನಡೆಸಿದರೆ ತಲಾ ₹3 ಲಕ್ಷ ನೀಡುವುದಾಗಿ ಅವರಿಗೆ ಭರವಸೆ ನೀಡಲಾಗಿತ್ತು. ಸೆ.27ರಂದು ಪ್ರವೀಣ್‌ನನ್ನು ಅರಣ್ಯ ಪ್ರದೇಶಕ್ಕೆ ಕರೆಸಿಕೊಳ್ಳಲಾಗಿತ್ತು. ಅಲ್ಲಿ ಕಾಯುತ್ತಿದ್ದ ರಾಜಾ ಮತ್ತು ಕಲ್ಯಾಣ್ ತಲಾ ಒಂದು ಗುಂಡು ಹಾರಿಸಿ ಪ್ರವೀಣ್‌ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಎರಡು ಗುಂಡಿನ ಗಾಯಗಳು ಪತ್ತೆಯಾಗಿವೆ.

ಪ್ರಕರಣದ ತನಿಖೆಯಲ್ಲಿ ನಾಲ್ಕು ಮೊಬೈಲ್‌ಗಳು, ಹೊಸ ಮೊಬೈಲ್ ಹಾಗೂ ಸಿಮ್ ಕಾರ್ಡ್, ಸ್ವಿಫ್ಟ್ ಕಾರು ಮತ್ತು ಪ್ರವೀಣ್‌ನ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಎರಡು ಅಕ್ರಮ .315 ಬೋರ್ ನಾಡ ಪಿಸ್ತೂಲ್‌ಗಳು ಹಾಗೂ ಜೀವಂತ ಮತ್ತು ಬಳಸಿದ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ರೇಖಾ, ವಿಕಾಸ್, ರಾಜಾ ಮತ್ತು ಕಲ್ಯಾಣ್ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1), 3(5), 61(2) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

About The Author

Leave a Reply