

ಬೆಂಗಳೂರು: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಎಸ್‌ಐಟಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಕರಣದ ತನಿಖಾಧಿಕಾರಿಯಾಗಿ ಓರ್ವ ಹಿರಿಯ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.
ಲೋಕೇಶ್ ಬಿ ಜಗಲಾಸರ್ ಅವರನ್ನು ಪ್ರಕರಣದ ತನಿಖಾ ಅಧಿಕಾರಿಯಾಗಿ ಎಸ್‌ಐಟಿ ಮುಖ್ಯಸ್ಥ ಎನ್.ಶಶಿಕುಮಾರ್ ನೇಮಿಸಿದ್ದಾರೆ. ಪ್ರಕರಣದ ತೀವ್ರತೆ, ಗಂಭೀರತೆ ಅರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ತನಿಖಾ ಅಧಿಕಾರಿಗೆ ಸಹಾಯಕ ತನಿಖಾ ಅಧಿಕಾರಿಯಾಗಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇಮಕಗೊಂಡಿದ್ದಾರೆ. ಓರ್ವ ಐಪಿಎಸ್ ಹಾಗೂ ಓರ್ವ ಕೆಎಸ್‌ಪಿಎಸ್ ಅಧಿಕಾರಿಗಳಿಂದ ತನಿಖೆ ನಡೆಯಲಿದೆ.

ಲೋಕೇಶ್ ಬಿ ಜಗಲಾಸರ್ ಈ ಹಿಂದೆ ಬಾಗಲಕೋಟೆ ಹಾಗೂ ಧಾರವಾಡದಲ್ಲಿ ಎಸ್‌ಪಿ ಆಗಿ, ಬೆಂಗಳೂರು ನಗರದಲ್ಲಿ ಡಿಸಿಪಿಯಾಗಿ ಕೆಲಸ ಮಾಡಿದ್ದರು. ಪ್ರಸ್ತುತ ಸಿಐಡಿಯಲ್ಲಿ ಎಸ್‌ಪಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ಟೆಕ್ನಿಕಲ್ ಕೇಪಬಲ್ ಇರುವ ಅಧಿಕಾರಿಗಳ ಎಸ್‌ಐಟಿಗೆ ಸೂಚಿಸಿತ್ತು. ಲೋಕೇಶ್ ಇಂಜಿನಿಯರ್ ಪದವೀಧರರಾಗಿದ್ದು, ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಏಳು ಕೋಟಿ ದರೋಡೆ ಪ್ರಕರಣಗಳಲ್ಲಿ ತನಿಖಾ ನೇತೃತ್ವ ವಹಿಸಿದ್ದರು ಎಂಬುದಾಗಿ ತಿಳಿದುಬಂದಿದೆ.






