

ಮಂಗಳೂರು: 2025ರ ಮೇ 1ರಂದು ಬಜಪೆಯಲ್ಲಿ ನಡೆದಿದ್ದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಬಜಪೆ ವ್ಯಾಪ್ತಿಯ ಮುಸ್ಲಿಂ ಯುವಕನೊಬ್ಬನನ್ನು ಕೊಲ್ಲಲು ಸಂಚು ನಡೆಸಿರುವ ಬಗ್ಗೆ ಬಜಪೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಪೊಲೀಸರು ಗಂಭಿರವಾಗಿ ಪರಿಗಣಿಸಿ ಸಮಗ್ರವಾಗಿ ತನಿಖೆ ನಡೆಸಿ ಸಂಘಟಿತ ಕೊಲೆ ಸಂಚಿನಲ್ಲಿ ಭಾಗಿಯಾಗಿರುವ ಸೂತ್ರಧಾರರು ಮತ್ತು ಹಣಕಾಸಿನ ನೆರವು ನೀಡಿದವರನ್ನು ಕಾನೂನಿನ ಕುಣಿಕೆಗೆ ತರಬೇಕು ಎಂದು SDPI ಪಕ್ಷದ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಆಗ್ರಹಿಸಿದರು.
ನಗರದ SDPI ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪೊಲೀಸರು ಈ ಸಂಚನ್ನು ಸಮಯಕ್ಕೆ ಸರಿಯಾಗಿ ತಡೆದು ಮೂವರನ್ನು ಬಂಧಿಸಿರುವುದು ಶ್ಲಾಘನೀಯವಾದರೂ ಪ್ರಕರಣದ ಮೂಲ ಬೇರುಗಳನ್ನು ಕಿತ್ತೊಗೆಯುವಲ್ಲಿ ಇದು ಸಾಕಾಗುವುದಿಲ್ಲ ಎಂದರು. ಈ ಪ್ರಕರಣದಲ್ಲಿ ಸೂತ್ರಧಾರರ ಬಂಧನ ಆಗಬೇಕು, ಸಂತ್ರಸ್ತರಿಗೆ ರಕ್ಷಣೆ ನೀಡಬೇಕು, ಪೊಲೀಸರು ಸಾಕ್ಷ್ಯ ಸಂರಕ್ಷಣೆ ಮಾಡಬೇಕು ಮತ್ತು ಈ ಸಂಚು ರೂಪಿಸಲು ಬಳಕೆಯಾದ ಸಂಘ ಪರಿವಾರ ಅಥವಾ ಬಿಜೆಪಿ ಕಚೇರಿಗಳನ್ನು ಗುರುತಿಸಿ ತಕ್ಷಣವೇ ಸೀಲ್ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಕರಣದಲ್ಲಿ ಮುಸ್ಲಿಂ ಯುವಕರಿದ್ದರೆ ತಕ್ಷಣವೇ ಯುಎಪಿಎ ಕಾಯ್ದೆ ಹಾಕಿ ದೆಹಲಿಯಿಂದ ಎನ್‌ಐಎ ತಂಡ ಬರುತ್ತದೆ. ಆದರೆ ಇಲ್ಲಿ ಆರೋಪಿಗಳು ಸಂಘ ಪರಿವಾರಕ್ಕೆ ಸೇರಿದವರಾಗಿದ್ದರಿಂದ ತನಿಖೆಯ ವೇಗ ಮಂದಗತಿಯಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಒಬ್ಬ ಯುವಕನನ್ನು ಕೊಲ್ಲಲು ಲಕ್ಷಾಂತರ ರೂಪಾಯಿ ಸುರಿಯಲು ಯಾರು ಸಿದ್ಧರಾಗಿದ್ದರು? ಈ ಹಣಕಾಸಿನ ಮೂಲ ಯಾವುದು? ಎಂದು ಪ್ರಶ್ನಿಸಿದರು. ಈ ಹಣಕಾಸಿನ ಜಾಲವನ್ನು ಬೇಧಿಸಲು ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳು ತಕ್ಷಣವೇ ತನಿಖೆಗೆ ಇಳಿಯಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ರೌಡಿಶೀಟರ್ ಭರತ್ ಕುಮ್ಡೇಲ್ ಪರವಾಗಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿರುವುದನ್ನು ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ನೋಟೀಸ್ ನೀಡಲು ಪೊಲೀಸರು ಅವರ ಮನೆಗೇ ತೆರಳಿರುವುದನ್ನು ಅವರು ಖಂಡಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಅವರನ್ನು ಲೋಕಾಯುಕ್ತ ಕಚೇರಿಗೆ ಕರೆಸಿ ವಿಚಾರಣೆ ನಡೆಸಿರುವಾಗ, ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿಯಾಗಿರುವ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮನೆಗೆ ಪೊಲೀಸರು ಹೋಗಿ ವಿಚಾರಣೆ ನಡೆಸಿರುವುದನ್ನು ಅವರು ಖಂಡಿಸಿದರು. ಪೊಲೀಸರ ಸಡಿಲಿಕೆಯ ಕಾರಣಕ್ಕೆ ಕಲ್ಲಡ್ಕ ಭಟ್ ಬಿಸಿ ರೋಡ್‌ನಲ್ಲಿ ನಿಂತು ಕಾನೂನನ್ನು ನಿಂದಿಸುವ ಧೈರ್ಯ ತೋರಿದ್ದಾರೆ ಎಂದರು.
ಈ ಘಟನೆಗಳ ಕುರಿತು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಬಿಜೆಪಿ ಶಾಸಕರು ಏಕೆ ಮೌನಕ್ಕೆ ಶರಣಾಗಿದ್ದಾರೆ?” ಎಂದು ಅವರು ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣ ನೆಲೆಸಬೇಕಾದರೆ ಸರಕಾರ ಮತ್ತು ಪೊಲೀಸ್ ಇಲಾಖೆ ಯಾವುದೇ ದಾಕ್ಷಿಣ್ಯವಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಢಿಯಲ್ಲಿ SDPI ಮಂಗಳೂರು ನಗರ ಜಿಲ್ಲಾಧ್ಯಕ್ಣ ಅಶ್ರಫ್ ಅಡ್ಡೂರು, ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.






