

ಚಿಕ್ಕಮಗಳೂರು: ದಸರಾ ರಜೆಯ ಖುಷಿಯಲ್ಲಿದ್ದ ಕಂದಮ್ಮಗಳ ಪಾಲಿಗೆ ವಿಧಿ ಕ್ರೂರವಾಗಿ ಕಣ್ಣಾಮುಚ್ಚಾಲೆ ಆಡಿದೆ. ಚಿಕ್ಕಮಗಳೂರಿನಲ್ಲಿ (Chikmagalur) ಈಜಲು ತೆರಳಿದ್ದ ಮೂವರು ಬಾಲಕರು ನೀರು ಪಾಲಾಗಿರುವ (Death) ದಾರುಣ ಘಟನೆ (Crime) ನಡೆದಿದೆ.
ಮೂವರು ಬಾಲಕರು ನೀರುಪಾಲು
ದಸರಾ ರಜೆಯ ಮಜಾ ಅನುಭವಿಸಲು ಕೆರೆಗೆ ಈಜಲು ತೆರಳಿದ್ದ ಒಂದೇ ವಯಸ್ಸಿನ ಮೂವರು ಅಪ್ರಾಪ್ತ ಬಾಲಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದಲ್ಲಿ ಜರುಗಿದೆ.
ಘಟನೆಯಲ್ಲಿ ಲಿಖಿತ್ (12), ಭುವನ್ (12) ಹಾಗೂ ತರುಣ್ (12) ಎಂಬ ಕಂದಮ್ಮಗಳು ಸಾವನ್ನಪ್ಪಿದ್ದಾರೆ. ಮಂಗಳವಾರ ಮಧ್ಯಾಹ್ನ ಮನೆಯಿಂದ ಆಟವಾಡಲು ಹೊರಟಿದ್ದ ಈ ಮಕ್ಕಳು, ಮರ್ಲೆ ಗ್ರಾಮದ ಹತ್ತಿರವಿರುವ ಕೆರೆಗೆ ಈಜಾಡಲು ಇಳಿದಿದ್ದರು. ಆದರೆ ಮಕ್ಕಳಿಗೆ ಸರಿಯಾಗಿ ಈಜು ಬಾರದಿರುವುದು ಹಾಗೂ ಕೆರೆಯ ಆಳದ ಅಂದಾಜು ಸಿಗದೆ ಈ ದುರಂತ ಸಂಭವಿಸಿದೆ.

ಒಬ್ಬರನ್ನು ರಕ್ಷಿಸಲು ಹೋಗಿ ಮತ್ತೊಬ್ಬರು ನೀರಿನಲ್ಲಿ ಮುಳುಗಿ ಒಟ್ಟು ಮೂವರೂ ಆಳಕ್ಕೆ ಸಿಲುಕಿ ಉಸಿರುಗಟ್ಟಿದ್ದಾರೆ. ಸಂಜೆ ಮಕ್ಕಳು ಮನೆಗೆ ಬಾರದಿರುವುದನ್ನು ಕಂಡು ಆತಂಕಗೊಂಡ ಪೋಷಕರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದಾಗ, ಕೆರೆಯ ದಂಡೆಯ ಮೇಲೆ ಮಕ್ಕಳ ಬಟ್ಟೆಗಳು ಪತ್ತೆಯಾಗಿವೆ. ತಕ್ಷಣವೇ ಸ್ಥಳೀಯರು ನೀರಿಗೆ ಹಾರಿ ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






