

ಬಂಟ್ವಾಳ: ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ Form No. 7ಗೆ ಸಂಬಂಧಿಸಿದಂತೆ ಸಲ್ಲಿಕೆಯಾಗುತ್ತಿರುವ ಆಕ್ಷೇಪಣೆಗಳು ಹಾಗೂ ದಾಖಲೆಗಳ ದುರುಪಯೋಗದ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಅರ್ಹ ಫಲಾನುಭವಿಗಳ ಹಕ್ಕುಗಳನ್ನು ರಕ್ಷಿಸುವಂತೆ SDPI ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್ ಎಸ್. ಎಚ್. ಅವರ ನೇತೃತ್ವದ ನಿಯೋಗ ಬಂಟ್ವಾಳ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿತು.
ತಾಲೂಕಿನ ಕೆಲವು ಗ್ರಾಮಗಳಲ್ಲಿ Form No. 7ಗೆ ಸಂಬಂಧಿಸಿದ ಅರ್ಜಿ ಹಾಗೂ ದಾಖಲೆಗಳನ್ನು ಹೊಂದಿರುವ ಅರ್ಜಿದಾರರು/ಹಕ್ಕುದಾರರ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಿರುವ ಪ್ರಕರಣಗಳು ಗಮನಕ್ಕೆ ಬಂದಿದ್ದು, ಕೆಲವು ಸಂದರ್ಭಗಳಲ್ಲಿ ಈ ಪ್ರಕ್ರಿಯೆಯ ದುರುಪಯೋಗವಾಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ವ್ಯಕ್ತವಾಗಿವೆ.
ಆಕ್ಷೇಪಣೆ ಸಲ್ಲಿಸುವುದು ಕಾನೂನುಬದ್ಧ ಪ್ರಕ್ರಿಯೆಯ ಭಾಗವಾಗಿದ್ದರೂ, ಪ್ರತಿಯೊಂದು ಆಕ್ಷೇಪಣೆಯನ್ನೂ ಸಂಬಂಧಪಟ್ಟ ದಾಖಲೆಗಳು, ವಾಸ್ತವಾಂಶಗಳು ಹಾಗೂ ಅರ್ಜಿದಾರರ ಹೇಳಿಕೆಗಳನ್ನು ಆಧರಿಸಿ ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ಪರಿಶೀಲಿಸಬೇಕು. ಕೇವಲ ಆಕ್ಷೇಪಣೆ ಸಲ್ಲಿಕೆಯಾಗಿದೆ ಎಂಬ ಕಾರಣಕ್ಕೆ ಅರ್ಹ ವ್ಯಕ್ತಿಗಳ ಹಕ್ಕುಗಳಿಗೆ ಧಕ್ಕೆಯಾಗಬಾರದು.

Form No. 7ಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಸಮಗ್ರವಾಗಿ ಪರಿಶೀಲಿಸುವುದು, ಸಂಬಂಧಪಟ್ಟ ಅರ್ಜಿದಾರರು ತಮ್ಮ ದಾಖಲೆಗಳನ್ನು ಮಂಡಿಸಲು ಸಮರ್ಪಕ ಅವಕಾಶ ಕಲ್ಪಿಸುವುದು, ಆಧಾರರಹಿತ ಅಥವಾ ದುರುದ್ದೇಶಪೂರಿತ ಆಕ್ಷೇಪಣೆಗಳಿದ್ದಲ್ಲಿ ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಈ ಕುರಿತು ಸಾರ್ವಜನಿಕರಲ್ಲಿ ಇರುವ ಗೊಂದಲ ನಿವಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗದರ್ಶನ ನೀಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಅಲ್ಲದೆ, ಬಡವರು, ರೈತರು ಹಾಗೂ ಸಾಮಾನ್ಯ ಕುಟುಂಬಗಳು ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ಉಂಟಾಗದಂತೆ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು.
ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯೊಂದಿಗೂ ಫಾರಂ No. 7ಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸಾರ್ವಜನಿಕರ ಆತಂಕಗಳ ಕುರಿತು ಮಾತುಕತೆ ನಡೆಸಿ, ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಹಾಗೂ ಪಾರದರ್ಶಕವಾಗಿ ಪರಿಹರಿಸುವ ಕುರಿತು ಮನವಿ ಮಾಡಲಾಯಿತು.
ಕೇವಲ ಅಲ್ಪಸಂಖ್ಯಾತರ ಮತಗಳನ್ನು ಗುರಿಯಾಗಿಸಿಕೊಂಡು ಫಾರಂ 7 ಮೂಲಕ ಮತಗಳನ್ನು ತೆಗೆದುಹಾಕಲು ಅರ್ಜಿಯನ್ನು ಸಲ್ಲಿಸಿದ ಬಿಜೆಪಿಯ ಬಿ ಎಲ್ ಎ ಗಳನ್ನು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಕಾನೂನು ಜನರ ಹಕ್ಕುಗಳನ್ನು ರಕ್ಷಿಸುವ ಸಾಧನವಾಗಬೇಕೇ ಹೊರತು, ಸಾಮಾನ್ಯ ಜನರನ್ನು ಅನಿಶ್ಚಿತತೆ ಮತ್ತು ಆತಂಕಕ್ಕೆ ತಳ್ಳುವ ಕಾರಣವಾಗಬಾರದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ SDPI ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, SDPI ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಹಾಗೂ SDPI ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಲವೂರು ಉಪಸ್ಥಿತರಿದ್ದರು.






